ಮಂಡ್ಯ, ಡಿಸೆಂಬರ್ 9, 2025 : ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ವಡ್ಡರಹಳ್ಳಿ ಬಳಿ ಖಾಸಗಿ ಶಾಲೆಯೊಂದರ ಬಸ್ ಅಡ್ಡಗಟ್ಟಿದ ಇಬ್ಬರು ಯುವಕರು, ಬಸ್ ಚಾಲಕನಿಗೆ ಆವಾಜ್ ಹಾಕಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು ಕೆಳಗಿಳಿಸುವಂತೆ ಆಗ್ರಹಿಸಿ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.
ವಡ್ಡರಹಳ್ಳಿ ಗ್ರಾಮದ ಕಿರಣ್ ಮತ್ತು ಗಿರೀಶ್ ಎಂಬುವರು ಶಾಲಾ ಬಸ್‌ಗೆ ತಮ್ಮ ಬೈಕ್ ಅಡ್ಡ ನಿಲ್ಲಿಸಿ ಚಾಲಕನಿಗೆ ಅವಾಜ್ ಹಾಕಿರುವ ಪುಂಡರು.

ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಬಸ್‌ನಿಂದ ಕೆಳಗಿಳಿಸುವಂತೆ ಈ ಯುವಕರು ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ. ಯುವಕರು ಮದ್ಯಪಾನ ಮಾಡಿದ್ದರಿಂದ ಈ ರೀತಿ ಪುಂಡಾಟಿಕೆ ನಡೆಸಿದ್ದಾರೆ ಎಂದು ಬಸ್ ಚಾಲಕರು ಆರೋಪಿಸಿದ್ದಾರೆ. ಪುಂಡರು ಬಸ್ ಅಡ್ಡಗಟ್ಟಿ ಕಿರಿಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬಸ್ ಚಾಲಕರು ಈ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಪುಂಡಾಟ ನಡೆಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಈ ಕುರಿತು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ವಹಿಸಿರುವುದಾಗಿ ತಿಳಿಸಿದ್ದಾರೆ.
