ಮೈಸೂರು, ನವೆಂಬರ್ 27, 2025 : ಐತಿಹಾಸಿಕ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ (ನಂಜುಂಡೇಶ್ವರ) ದೇವಾಲಯದ ಹುಂಡಿ ಎಣಿಕೆ ಕಾರ್ಯ ಇಂದು ನೆರವೇರಿದ್ದು, ಭಾರಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ಒಟ್ಟಾರೆ ₹3,02,63,795 (ಮೂರು ಕೋಟಿ, ಎರಡು ಲಕ್ಷ, ಅರವತ್ತ ಮೂರು ಸಾವಿರದ ಏಳುನೂರ ತೊಂಬತ್ತೈದು ರೂಪಾಯಿಗಳು). ಹಣದ ಜೊತೆಗೆ 82 ಗ್ರಾಂ 800 ಮಿಲಿ ಗ್ರಾಂ ಚಿನ್ನ, 2 ಕೆಜಿ 680 ಗ್ರಾಂ ಬೆಳ್ಳಿ ಹಾಗೂ 34 ವಿದೇಶಿ ಕರೆನ್ಸಿಗಳೂ ಸಂಗ್ರಹವಾಗಿವೆ.

ಕಾರ್ತೀಕ ಮಾಸದ ವಿಶೇಷ ಹಿನ್ನೆಲೆಯಲ್ಲಿ ಈ ಬಾರಿ ದಕ್ಷಿಣಕಾಶಿಗೆ ಬಂದು ಶ್ರೀಕಂಠೇಶ್ವರನ ದರ್ಶನ ಪಡೆದಿರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದರೆ ಶುಭವಾಗುತ್ತದೆ ಎಂಬ ಬಲವಾದ ನಂಬಿಕೆಯಿಂದಾಗಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಪರಿಣಾಮವಾಗಿ, ದೇವಾಲಯದ ಹುಂಡಿಯ ಕಾಣಿಕೆ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ಈ ಬಾರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಭಾರತ ಸೇರಿದಂತೆ ದೇಶ ವಿದೇಶಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ನಂಜುಂಡೇಶ್ವರನ ದರ್ಶನ ಪಡೆದಿದ್ದಾರೆ.
ಎಣಿಕೆ ಕಾರ್ಯ:
ದೇವಾಲಯದ ದಾಸೋಹ ಭವನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ (EO) ಜಗದೀಶ್ ಕುಮಾರ್ ಅವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
