ಮೈಸೂರು, ನವೆಂಬರ್ 26, 2025 : ಮೈಸೂರು ನಗರದ ಶಾಂತಿ ನಗರದಲ್ಲಿ ಬುಧವಾರ ಮುಂಜಾನೆ ಭೀಕರ ಕೊಲೆ ನಡೆದಿದೆ. ಕೇವಲ 19 ವರ್ಷದ ಯುವಕ ಸಯ್ಯದ್ ಸೂಫಿಯಾನ್ ಎಂಬಾತನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇಡೀ ಘಟನೆಯ ಭೀಕರ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯು ಬುಧವಾರ ಮುಂಜಾನೆ ಸುಮಾರು 5.40ರ ಸುಮಾರಿಗೆ ಮೈಸೂರಿನ ಶಾಂತಿ ನಗರದ ರಸ್ತೆಯಲ್ಲಿ ನಡೆದಿದೆ. ಕೊಲೆಯಾದ ಯುವಕ ಸಯ್ಯದ್ ಸೂಫಿಯಾನ್ ಮತ್ತು ಕೊಲೆ ಮಾಡಿದ ಇಬ್ಬರು ಆರೋಪಿಗಳು ಮದ್ಯವ್ಯಸನಿಗಳಾಗಿದ್ದರು ಎಂದು ತಿಳಿದುಬಂದಿದೆ. ಪರಸ್ಪರರ ನಡುವಿನ ವೈಯಕ್ತಿಕ ಕಲಹವೇ ಕೊಲೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಸೂಫಿಯಾನ್ ತನ್ನ ಸ್ನೇಹಿತನೊಂದಿಗೆ ಟೀ ಕುಡಿಯಲು ಹೋದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಆರೋಪಿಗಳು ಸೂಫಿಯಾನ್‌ನನ್ನು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ, ಚಾಕುವಿನಿಂದ ಎದೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಸೂಫಿಯಾನ್ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕಾಗಿ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆದರೆ, ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಯಾವೊಬ್ಬ ನಾಗರಿಕರೂ ಸಹಾಯಕ್ಕೆ ಧಾವಿಸಿಲ್ಲ. ಪರಿಣಾಮವಾಗಿ, ರಸ್ತೆಯಲ್ಲೇ ಯುವಕ ನರಳಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಕೊಲೆ ನಡೆಯುವಾಗ ಸಹಾಯಕ್ಕೆ ಬಾರದ ಜನರ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ಇಬ್ಬರು ಸ್ನೇಹಿತರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಭೀಕರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
