ನಂಜನಗೂಡು: ನವೆಂಬರ್ 17, 2025 : ನಂಜನಗೂಡು-ಹುಲ್ಲಹಳ್ಳಿ ರಸ್ತೆಯಲ್ಲಿ ನಡೆಯುತ್ತಿರುವ ಮರು ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ, ಸ್ಥಳೀಯ ಗ್ರಾಮಸ್ಥರು ಮತ್ತು ರೈತರು ಕಾಮಗಾರಿ ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ₹7 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ ಈ ರಸ್ತೆ ಕಾಮಗಾರಿಯು ಕಳಪೆಯಾಗಿದ್ದು, ಅಧಿಕಾರಿಗಳು ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ನಿರ್ಮಾಣದ ನಿಯಮಗಳ ಪ್ರಕಾರ, ಮರು ಡಾಂಬರೀಕರಣಕ್ಕೆ ಮೊದಲು ರಸ್ತೆಯ ಇಕ್ಕೆಲಗಳನ್ನು ಹಾಗೂ ಮೇಲ್ಮೈಯನ್ನು ಸರಿಯಾಗಿ ಶುಚಿಗೊಳಿಸಬೇಕು. ಆದರೆ, ಗುತ್ತಿಗೆದಾರರು ರಸ್ತೆಯ ಇಕ್ಕೆಲಗಳಲ್ಲಿನ ಕಲ್ಲು-ಮಣ್ಣನ್ನು ಶುಚಿಗೊಳಿಸದೇ, ನೇರವಾಗಿ ಮರು ಡಾಂಬರೀಕರಣ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಳಕೆಯಾಗುತ್ತಿರುವ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಹೀಗೆ ಮಾಡಿದ ರಸ್ತೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ. ಕೇವಲ ಹಾಲಿ ರಸ್ತೆಗೆ ಪ್ಯಾಚ್‌ವರ್ಕ್ (Patch Work) ಮಾಡಿ ಡಾಂಬರು ಹಾಕಲು ಏಳು ಕೋಟಿ ರೂಪಾಯಿ ಏಕೆ ಬೇಕು? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಣ ಲಪಟಾಯಿಸಲು ಈ ರೀತಿ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ ಸ್ಥಳೀಯ ರೈತರು, “ನಾವು ಬೆವರು ಸುರಿಸಿ ದುಡಿದಿರುವ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದನ್ನು ನಾವು ಸಹಿಸುವುದಿಲ್ಲ. ಕಳಪೆ ಕಾಮಗಾರಿ ಮಾಡುವುದಾದರೆ ಈ ಕೂಡಲೇ ಕೆಲಸವನ್ನು ನಿಲ್ಲಿಸಿ. ಇಲ್ಲವೇ, ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿ ಕೊಡಬೇಕು” ಎಂದು ಆಗ್ರಹಿಸಿದರು. ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು ಮತ್ತು ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
