ಮೈಸೂರು, ನವೆಂಬರ್ 15, 2025 : ದಿವಂಗತ ನಟ ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಇದೀಗ ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಶಬರಿಮಲೆಗೆ ತೆರಳುವ ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಪುನೀತ್ ಅಭಿಮಾನಿಗಳು ಉಚಿತ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದ ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳು ಈ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಈ ಆಂಬುಲೆನ್ಸ್ ಮುಂದಿನ ಎರಡು ತಿಂಗಳ ಕಾಲ ಶಬರಿಮಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ನಾಟಕದಿಂದ ಆಗಮಿಸುವ ಅಯ್ಯಪ್ಪ ಭಕ್ತರಿಗೆ ತುರ್ತು ಸೇವೆಯನ್ನು ನೀಡಲಿದೆ.
ಸಂಸದ ಯದುವೀರ್ ಅವರಿಂದ ಚಾಲನೆ: ಈ ಉಚಿತ ಆಂಬುಲೆನ್ಸ್ ಸೇವೆಗೆ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು. ಸಮಾಜ ಸೇವಾ ಮನೋಭಾವದಿಂದ ಈ ಸೇವೆ ಒದಗಿಸುತ್ತಿರುವ ಪುನೀತ್ ಅಭಿಮಾನಿಗಳ ಕಾರ್ಯವನ್ನು ಸಂಸದ ಯದುವೀರ್ ಅವರು ಶ್ಲಾಘಿಸಿದರು. ಆಂಬುಲೆನ್ಸ್ ಸೇವೆ ಪಡೆಯುತ್ತಿರುವ ಅಭಿಮಾನಿಗಳು, ಶಬರಿಮಲೆಗೆ ತೆರಳುವ ಕರ್ನಾಟಕದ ಎಲ್ಲಾ ಭಕ್ತರು ಈ ಉಚಿತ ಸೇವೆಯ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಡಾ. ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಳಕಳಿಯ ಆದರ್ಶವನ್ನು ಅವರ ಅಭಿಮಾನಿಗಳು ಈ ಮೂಲಕ ಮುಂದುವರೆಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
