ಬೆಂಗಳೂರು, ನವೆಂಬರ್ 6, 2025 : ಸ್ಯಾಂಡಲ್ ವುಡ್ ಖ್ಯಾತ ನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಥೈರಾಯ್ಡ್ ಕ್ಯಾನ್ಸರ್ ಸಮಸ್ಯೆಯಿಂದ ಬಳಳುತ್ತಿದ್ದ ಹಿರಿಯ ನಟ ಇಂದು ಅಸುನೀಗಿದ್ದಾರೆ.
ಅನೇಕ ತಿಂಗಳುಗಳಿಂದ ಹರೀಶ್ ರಾಯ್ ಚಿಕಿತ್ಸೆ ಪಡೆಯುತ್ತಿದ್ದರು. ನಟ-ನಟಿಯರು ಹರೀಶ್ ರಾಯ್ ಗೆ ಆರ್ಥಿಕ ಸಹಾಯ ಮಾಡಿದ್ದರು. ಆದ್ರೆ ಖಾಯಿಲೆ ಉಲ್ಬಣವಾದ ಕಾರಣ ಹರೀಶ್ ರಾಯ್ ಇಹಲೋಕ ತ್ಯಜಿಸಿದ್ದಾರೆ.

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹರೀಶ್ ರಾಯ್ ವಿಲನ್ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಆದ್ರೆ ಅನಾರೋಗ್ಯ ಅವರನ್ನು ಬಳಲಿಬೆಂದುಮಾಡಿತ್ತು.ಇದೀಗ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾರೆ.
‘ಓಂ’, ‘ನಲ್ಲ’ ಸೇರಿದಂತೆ ‘ಕೆಜಿಎಫ್’, ‘ಕೆಜಿಎಫ್ 2’ ಹಾಗೂ ಕನ್ನಡದ ಹಲವಾರು ಸಿನಿಮಾಗಳಲ್ಲಿ ಉತ್ತಮ ನಟನ ಕೌಶಲ್ಯ ತೋರಿದ್ದ ಹರೀಶ್ ರಾಯ್ ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದು, ಹಿರಿಯ ನಟನ ಸಾವಿಗೆ ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮಂಗಳೂರು ಮೂಲದ ಹರೀಶ್ ರಾಯ್ 90ರ ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದಾರೆ. ನಿಜ ಜೀವನದಲ್ಲಿಯೂ ಸಹ ಪ್ರಕರಣ ಒಂದರಲ್ಲಿ ಹರೀಶ್ ರಾಯ್ ಅವರು ಜೈಲು ಪಾಲಾಗಿದ್ದರು. ನಂತರ ಕೇಸ್ ಖುಲಾಸೆ ಆಗಿತ್ತು. ಇದೀಗ ಬದುಕಿಗೆ ವಿದಾಯ ಹೇಳಿ ಇಹಲೋಕ ತ್ಯಜಿಸಿದ್ದಾರೆ.
ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಸಣ್ಣವಾಗಿ ಗುರುತೇ ಸಿಗದಂತೆ ಹರೀಶ್ ರಾಯ್ ಬದಲಾವಣೆ ಆಗಿದ್ದರು. ಹರೀಶ್ ರಾಯ್ ತಮ್ಮ ಚಿಕಿತ್ಸೆಗಾಗಿ ಅವರು ಸಹಾಯವನ್ನು ಸಹ ಅಂಗಲಾಚಿದ್ದರು. ಅದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ- ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ನಟ ಯಶ್ ಹಣ ನೀಡಿ ಉದಾರತೆ ಮೆರೆದಿದ್ದರು. ಆದ್ರೆ ಯಾರ ಹಾರೈಕೆಯೂ ಫಲಿಸದ ಕಾರಣ ಹರೀಶ್ ರಾಯ್ ಬದುಕಿನ ಪ್ರಯಾಣ ಮುಗಿಸಿದ್ದಾರೆ.
