ಮೈಸೂರು, ನವೆಂಬರ್ 4, 2025 : ಕಾಡಂಚಿನ ಗ್ರಾಮಗಳ ಆಸುಪಾಸಿನಲ್ಲಿ ವನ್ಯಜೀವಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್. ಎಸ್. ರವಿಶಂಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಮಾನವ ಮತ್ತು ವನ್ಯಜೀವಿಗಳ ಸಂಘರ್ಷಕ್ಕೆ ಕಾರಣಗಳನ್ನು ವಿಶ್ಲೇಷಿಸಿದ ಅವರು, ಹುಲಿಗಳ ನಡವಳಿಕೆ ಮತ್ತು ಪರಿಸರದಿಂದಾಗುವ ಬದಲಾವಣೆಗಳನ್ನು ವಿವರಿಸಿದರು.
ಇದೀಗ ಹುಲಿಗಳ ಮಿಲನದ ಸಮಯ ಆಗಿರುವುದರಿಂದ, ಗಂಡು ಹುಲಿಗಳು ಹೆಣ್ಣು ಹುಲಿಗಳನ್ನು ಹುಡುಕಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಾಡುತ್ತವೆ. ಈ ಸಂದರ್ಭದಲ್ಲಿ ಅವುಗಳು ಮನುಷ್ಯರ ಎದುರಾದಾಗ ಅಪಾಯವನ್ನು ಎದುರಿಸುವ ಕಾರಣಕ್ಕೆ ದಾಳಿಗೆ ಮುಂದಾಗಬಹುದು. ಹುಲಿಗಳು ಸಾಮಾನ್ಯವಾಗಿ ಒಂದು ಸೀಮಿತ ಪ್ರದೇಶದಲ್ಲಿ ವಾಸಿಸುತ್ತವೆ. ಸರಹದ್ದು ವಿಸ್ತರಣೆಗಾಗಿ ನಡೆಯುವ ಕಾದಾಟದಲ್ಲಿ ಸೋತ ಅಥವಾ ದುರ್ಬಲ ಹುಲಿಗಳು ಕಾಡಿನಿಂದ ಹೊರಬಂದು ಕಾಡಂಚಿನ ಗ್ರಾಮಗಳತ್ತ ಬರುವ ಸಂಭವ ಹೆಚ್ಚು. ಇಂತಹ ಹುಲಿಗಳು ಮನುಷ್ಯರ ಮೇಲೆ ದಾಳಿ ನಡೆಸಬಹುದು. ಇದುವರೆಗೆ ಮನುಷ್ಯರ ಮೇಲೆ ದಾಳಿ ಮಾಡಿರುವ ಯಾವ ಹುಲಿಯೂ ಸಹ ಮನುಷ್ಯನ ದೇಹವನ್ನು ತಿಂದಿಲ್ಲ. ಈ ದಾಳಿಗಳು ಸಾಮಾನ್ಯವಾಗಿ ಆಕಸ್ಮಿಕ ಅಥವಾ ಭಯದಿಂದಾಗಿ ನಡೆಯುತ್ತವೆ ಎಂದು ಅವರು ಹೇಳಿದರು.
ಸಂಘರ್ಷ ತಡೆಗಟ್ಟಲು ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿದ ಡಾ. ರವಿಶಂಕರ್ ಅವರು, ಹುಲಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಈಗಾಗಲೇ ಸೂಕ್ತ ಪರಿಹಾರವನ್ನು ನೀಡಲಾಗಿದೆ. ಮಾನವನ ಮೇಲೆ ದಾಳಿ ಮಾಡುವ ಹುಲಿಗಳನ್ನು ಸೆರೆ ಹಿಡಿಯಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ಸಂಪೂರ್ಣವಾಗಿ ತಡೆಗಟ್ಟಲು ಇಲಾಖೆ ನಿರಂತರ ಕ್ರಮಗಳನ್ನು ಕೈಗೊಂಡಿದ್ದರೂ, ಕಾಡಂಚಿನ ಗ್ರಾಮಗಳ ಜನರು ಕೂಡಲೇ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಕಾಡಿನ ಕಾನೂನುಗಳು ಮತ್ತು ವನ್ಯಜೀವಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಕಾಡಂಚಿನ ಜನರು ಇಲಾಖೆಯೊಂದಿಗೆ ಸಹಕರಿಸಿದಲ್ಲಿ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
