ಮೈಸೂರು, ನವೆಂಬರ್ 4, 2025 : ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಬಹುಮುಖ ಪ್ರತಿಭೆ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು, ಚಿತ್ರರಂಗದ ಬೆಳವಣಿಗೆಗೆ ಪ್ರಶಸ್ತಿಗಳು ಮತ್ತು ಮೂಲಭೂತ ಸೌಕರ್ಯಗಳು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.

“ನಾನು ಒಬ್ಬ ಚಿಕ್ಕ ಕಲಾವಿದ. ಇಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಉಪಸ್ಥಿತರಿದ್ದಾರೆ,” ಎಂದು ತಮ್ಮ ಭಾಷಣ ಆರಂಭಿಸಿದ ರಿಷಬ್ ಶೆಟ್ಟಿ ಅವರು, “ಚಿತ್ರಗಳಿಗೆ ಪ್ರಶಸ್ತಿ ನೀಡಿ ಗೌರವಿಸುವುದರಿಂದ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಕಲಾವಿದರು ಮತ್ತು ತಂತ್ರಜ್ಞರಿಗೆ ಇದು ತುಂಬಾ ಮುಖ್ಯ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ 160 ಎಕರೆ ಪ್ರದೇಶದಲ್ಲಿ ಚಿತ್ರ ನಗರಿ ನಿರ್ಮಾಣವಾಗುತ್ತಿರುವ ವಿಷಯದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಈ ಯೋಜನೆಯಿಂದ ಚಿತ್ರರಂಗಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಜಗತ್ತಿನಲ್ಲಿ ತಂತ್ರಜ್ಞಾನವು ಹೆಚ್ಚು ಹೆಚ್ಚು ಬೆಳವಣಿಗೆ ಆಗುತ್ತಿದೆ. ಚಿತ್ರರಂಗವೂ ಅದಕ್ಕೆ ಹೊಂದಿಕೊಂಡು ಹೋಗಬೇಕಿದೆ. ಹೊಸ ತಂತ್ರಜ್ಞಾನ ಅಳವಡಿಕೆಗೆ ಈ ಚಿತ್ರ ನಗರಿ ಪೂರಕವಾಗುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದರು.
ಪ್ರಶಸ್ತಿಯನ್ನು ಸರ್ಕಾರಿ ಶಾಲೆ ಮಕ್ಕಳಿಗೆ ಅರ್ಪಣೆ:
ತಮಗೆ 2018ನೇ ಸಾಲಿನ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ’ ವಿಭಾಗದಲ್ಲಿ ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಚಿತ್ರಕ್ಕೆ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. “ನಾನು ಈ ಹಿಂದೆ ‘ಕಿರಿಕ್ ಪಾರ್ಟಿ’ ಚಿತ್ರಕ್ಕೂ ರಾಜ್ಯ ಪ್ರಶಸ್ತಿ ಪಡೆದಿದ್ದೆ,” ಎಂದು ನೆನಪಿಸಿಕೊಂಡರು. ಕೊನೆಯಲ್ಲಿ, “ನಾನು ಈ ಪ್ರಶಸ್ತಿಯನ್ನು ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ,” ಎಂದು ಘೋಷಿಸಿದರು.
