ಮೈಸೂರು, ಡಿಸೆಂಬರ್ 18, 2025 : ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕಳೆದ ರಾತ್ರಿ ಅನಿರೀಕ್ಷಿತ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಕೈದಿಗಳ ಬಳಿ ಇದ್ದ ಒಂಬತ್ತು ಮೊಬೈಲ್ ಫೋನ್‌ಗಳು ಪತ್ತೆಯಾಗಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಹಾಗೂ ಮೈಸೂರು ಕೇಂದ್ರ ಕಾರಾಗೃಹದಲ್ಲಿಯೂ ಖೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರಾ ಎಂಬ ಅನುಮಾನಗಳು ಎಡೆಮಾಡಿವೆ.
ಜೈಲಿನ ವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೇವಲ ಮೊಬೈಲ್‌ಗಳಷ್ಟೇ ಅಲ್ಲದೆ, 11 ಸಿಮ್ ಕಾರ್ಡ್‌ಗಳು, 2 ಚಾರ್ಜರ್‌ಗಳು ಮತ್ತು ಚಾರ್ಜಿಂಗ್ ಕೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಾರಾಗೃಹದ ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯು ರಾತ್ರಿ 10:55ಕ್ಕೆ ಆರಂಭವಾಗಿ ಮಧ್ಯರಾತ್ರಿ 1 ಗಂಟೆಯವರೆಗೆ ನಡೆಸಲಾಗಿದ್ದು, 11 ಸಿಮ್ ಕಾರ್ಡ್‌ಗಳು, 2 ಚಾರ್ಜರ್‌ಗಳು ಮತ್ತು ಚಾರ್ಜಿಂಗ್ ಕೇಬಲ್‌ಗಳು ಈ ವೇಳೆ ಪತ್ತೆಯಾಗಿವೆ.
ಕಾರಾಗೃಹದ ಆವರಣದಲ್ಲಿ ಇವು ನಿಷೇಧಿತ ವಸ್ತುಗಳಾಗಿರುವುದರಿಂದ, ವಶಪಡಿಸಿಕೊಂಡ ಎಲ್ಲಾ ಸೊತ್ತುಗಳನ್ನು ಮಂಡಿ ಮೊಹಲ್ಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳು ಪತ್ತೆಯಾಗಿರುವುದು ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.
ಇದೇ ವೇಳೆ, ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಿದ ಕಾರಾಗೃಹದ ಸಿಬ್ಬಂದಿಗಳ ತಂಡಕ್ಕೆ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಮೈಸೂರು ಕಾರಾಗೃಹದ ತಂಡಕ್ಕೆ ಪ್ರೋತ್ಸಾಹದಾಯಕವಾಗಿ 30 ಸಾವಿರ ರೂಪಾಯಿ ನಗದು ಬಹುಮಾನವನ್ನು ಸಹ ಅವರು ಘೋಷಿಸಿದ್ದಾರೆ.
