ಸರಗೂರು, ಜನವರಿ 7, 2026 : ಸರಗೂರು ತಾಲೂಕಿನ ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಬಳಿ ನಡೆದ ಈ ಘಟನೆಯು ಅತ್ಯಂತ ಭೀಕರವಾಗಿದ್ದು, ಭಕ್ತರು ಪೂಜೆಗೆಂದು ಹೋದ ಸಮಯದಲ್ಲಿ ಏಕಾಏಕಿ ಬಂದ ಒಂಟಿ ಸಲಗವು ಸಿಟ್ಟಿನಿಂದ ದಾಂಧಲೆ ನಡೆಸಿದೆ.

ಚೈನ್ ಗೇಟ್ ಬಳಿ ಸಾಲಾಗಿ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳನ್ನು ಆನೆಯು ತುಳಿದು ಜಖಂಗೊಳಿಸಿದ್ದು, ಆನಂತರ ಸಮೀಪದ ಮಳಿಗೆಯೊಂದನ್ನು ಸಹ ಧ್ವಂಸಗೊಳಿಸಿದೆ. ಅದೃಷ್ಟವಶಾತ್ ಭಕ್ತರು ದೇವಾಲಯದ ಒಳಗೆ ಇದ್ದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ. ಈ ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುವ ಮೂಲಕ ಕಾಡಂಚಿನ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದೆ.
