ಮೈಸೂರು, ಡಿಸೆಂಬರ್ 19, 2025 : ಜಗತ್ಪ್ರಸಿದ್ಧ ಮೈಸೂರು ಅರಮನೆಯ ಆವರಣವು ನಾಳೆ (ಡಿಸೆಂಬರ್ 20) ಒಂದು ಐತಿಹಾಸಿಕ ಧಾರ್ಮಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಶ್ರೀ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ 50ನೇ ವರ್ಷದ ಅಂಗವಾಗಿ ‘ಸುವರ್ಣಭಾರತೀ’ ಶೀರ್ಷಿಕೆಯಡಿ ‘ಸ್ತುತಿಶಂಕರ ಸ್ತೋತ್ರ ಮಹಾಸಮರ್ಪಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ತುತಿಶಂಕರ ಸಂಚಾಲನ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಅವರು ಈ ಕುರಿತು ಮಾಹಿತಿ ನೀಡಿದರು.

ಶೃಂಗೇರಿ ಜಗದ್ಗುರುಗಳು ಸನ್ಯಾಸ ದೀಕ್ಷೆ ಸ್ವೀಕರಿಸಿ 50 ವಸಂತಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ‘ಕಲ್ಯಾಣವೃಷ್ಟಿ ಮಹಾಭಿಯಾನ’ ಆಯೋಜಿಸಲಾಗಿದೆ. ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ತೋತ್ರ ಪಠಣದ ಈ ಮಹಾ ಸಮರ್ಪಣಾ ಕಾರ್ಯಕ್ರಮದಲ್ಲಿ ಸುಮಾರು 20 ರಿಂದ 25 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗಾತ್ಮ ಶ್ರೀಹರಿ ಡಿ, ಕಾಂಗ್ರೆಸ್ ಮುಖಂಡ ಹೆಚ್.ವಿ. ರಾಜೀವ್ ಹಾಗೂ ಬಿಜೆಪಿ ಮುಖಂಡ ರಘು ಕೌಟಿಲ್ಯ ಉಪಸ್ಥಿತರಿದ್ದರು.
