ಬೆಂಗಳೂರು, ಜನವರಿ 28,2026 :ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿರುವ ಬಿಲ್ಡರ್ ಶಿವಕುಮಾರ್ ಅವರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯೇ ಸುಮಾರು 18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಕೇವಲ 20 ದಿನಗಳ ಹಿಂದಷ್ಟೇ ವಿಕಾಶ ಮತ್ತು ಮಯಾ ವಿಷ್ಣು ಎಂಬುವವರ ಮೂಲಕ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿದ್ದ ದಿನೇಶ್ ಮತ್ತು ಕಮಲಾ ಎಂಬ ದಂಪತಿ ಈ ಕೃತ್ಯ ಎಸಗಿದ್ದಾರೆ. ಜನವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ, ನೆಲಮಹಡಿ ಹಾಗೂ ಮೊದಲ ಮಹಡಿಯ ಬೆಡ್‌ರೂಂ ಲಾಕರ್‌ಗಳನ್ನು ಕಬ್ಬಿಣದ ಸಲಾಕೆಯಿಂದ ಮುರಿದು 11.5 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳು, 5 ಕೆಜಿ ಬೆಳ್ಳಿ ಹಾಗೂ 11.5 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿದ್ದಾರೆ. ಇತರ ಕೆಲಸಗಾರರು ಇದನ್ನು ಗಮನಿಸಿ ಮಾಲೀಕರಿಗೆ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಮಾರತ್ತಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
