ಹಾಸನ, ನವೆಂಬರ್ 13: ಹಾಸನಾಂಬೆ ದರ್ಶನೋತ್ಸವ ಅಂತ್ಯಗೊಂಡ ಬೆನ್ನಲ್ಲೇ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 3 ಕೋಟಿ 71 ಲಕ್ಷ ಹಣ ಸಂಗ್ರಹವಾಗಿದೆ. ಟಿಕೆಟ್ ಮತ್ತು ಲಡ್ಡು ಪ್ರಸಾದಿಂದ 25.82 ಕೋಟಿ ಸಂಗ್ರಹವಾಗಿದ್ದು, ಒಟ್ಟು 29.55 ಕೋಟಿ ಆದಾಯ ದೇಗುಲಕ್ಕೆ ಬಂದಿದೆ. ಆ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 4 ಕೋಟಿ ರೂಪಾಯಿ ಆದಾಯ ಹೆಚ್ಚಳವಾಗಿದೆ. 2025ರಲ್ಲಿ ಎಲ್ಲ ಮೂಲಗಳಿಂದ 25.59 ಕೋಟಿ ರೂ. ಸಂಗ್ರಹವಾಗಿತ್ತು ಎಂದು ದೇಗುಲದ ಆಡಳಿತ ಅಧಿಕಾರಿ ಜಗದೀಶ್ ಗಂಗಣ್ಣನವರ್ ಮಾಹಿತಿ ನೀಡಿದ್ದಾರೆ.
43 ಗ್ರಾಂ ಚಿನ್ನಾಭರಣ, 1 ಕೆಜಿ 255 ಗ್ರಾಂ ಬೆಳ್ಳಿಯ ಆಭರಣ
2025ರಲ್ಲಿ 25.36 ಲಕ್ಷ ಭಕ್ತರು ದರ್ಶನ ಮಾಡಿದ್ದರೆ, 2026ರಲ್ಲಿ30.06 ಲಕ್ಷ ಭಕ್ತರು ಹಾಸನಾಂಬೆಯನ್ನು ಕಣ್ತುಂಬಿಕೊಂಡಿದ್ದಾರೆ. 43 ಗ್ರಾಂ ಚಿನ್ನಾಭರಣ, 1 ಕೆಜಿ 255 ಗ್ರಾಂ ಬೆಳ್ಳಿಯ ಆಭರಣಗಳನ್ನು ಕೂಡ ಕಾಣಿಕೆಯಾಗಿ ಭಕತರು ದೇವಿಗೆ ನೀಡಿದ್ದಾರೆ. ಕಂದಾಯ ಇಲಾಖೆಯ 500 ಸಿಬ್ಬಂದಿ, 50 ಸ್ಕೌಟ್ಸ್ ಅಂಡ್ ಗೈಡ್ಸ್ ಸಿಬ್ಬಂದಿ ಸೇರಿ ಒಟ್ಟು 600 ಮಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಸಿಂಗಾಪುರ, ಓಮನ್, ಬಹ್ರೇನ್, ಅಮೆರಿಕಾ, ಯುಎಇ, ಚೀನಾ ಕರೆನ್ಸಿಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.
