ಮೈಸೂರು, (ಅಕ್ಟೋಬರ್ 23): ರಾಜ್ಯ ರಾಜಕಾರಣದಲ್ಲಿ ಗಿರಕಿ ಹೊಡೀತಿದ್ದ ಸ್ಟಿಂಗ್ ಆಪರೇಷನ್ ಬೆಂಕಿ ಕಿಡಿ, ಈಗ ದೆಹಲಿ ಅಂಗಳ ತಲುಪಿದೆ. ಇದರ ನಡುವೆ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ, ತಮ್ಮ ತಂದೆ ಹೆಸರು ಕೆಡಿಸಲು ಸ್ವಪಕ್ಷದವರೇ (ಕಾಂಗ್ರೆಸ್) ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ ಎಂದು ಹೇಳೋ ಮೂಲಕ, ಇಡೀ ಪ್ರಕರಣಕ್ಕೆ ತಿರುವುಕೊಟ್ಟಿದ್ದಾರೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅಂತೂ, ಸಿಎಂ ಡಿಕೆಶಿ ವಿರುದ್ಧ ಮತ್ತೆ ಬೆಂಕಿಯುಗುಳಿಸಿದ್ದಾರೆ. ಇನ್ನೊಂದೆಡೆ ಸ್ಟಿಂಗ್ನಲ್ಲಿ ಸ್ವಪಕ್ಷದವರು ಇರುವುದು ಪತ್ತೆಯಾದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಸ್ಟಿಂಗ್ ಪ್ರಕರಣದ ದೂರುದಾರ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಒಬ್ಬ ಪತ್ರಕರ್ತ ಮತ್ತು ಮಂಗಳೂರಿನ ಕೃಪಾ ಆಳ್ವಾ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ. ಇದು ನನ್ನನ್ನು ಬ್ಲಾಕ್ಮೇಲ್ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡುವುದನ್ನು ತಡೆಯಲು ಕೋರ್ಟ್ ಆದೇಶ ತಂದಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಈ ವಿಚಾರ ನನ್ನ ಗಮನಕ್ಕೆ ಬಂತು. ಒಬ್ಬ ಪತ್ರಕರ್ತ ಮತ್ತು ಮಂಗಳೂರಿನ ಕೃಪಾ ಆಳ್ವಾ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ. ಜನರಿಗೆ ಸತ್ಯಾಂಶ ತಿಳಿಯಬೇಕು ಎನ್ನುವ ಉದ್ದೇಶದಿಂದ ನಾನೇ ಸ್ವಯಂಪ್ರೇರಿತವಾಗಿ ಪೊಲೀಸರಿಗೆ ದೂರು ನೀಡಿದ್ದೇನೆ. ಇದರಲ್ಲಿ ಯಾವುದೇ ಹುರುಳಿಲ್ಲ, ಸಂಪೂರ್ಣ ಸತ್ಯಕ್ಕೆ ದೂರವಾದ ಆರೋಪವಿದು” ಎಂದು ತಿಳಿಸಿದರು.
ರಾಜಕೀಯ ಲಾಭಕ್ಕಾಗಿ ಕೆಲವರು ಮಾತನಾಡುತ್ತಿದ್ದಾರೆ, ಮಾತನಾಡಿಕೊಳ್ಳಲಿ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು. ಇದರ ಹಿಂದೆ ಸ್ವಪಕ್ಷದವರಿದ್ದಾರೋ ಅಥವಾ ವಿರೋಧ ಪಕ್ಷದವರಿದ್ದಾರೋ ಎಂಬುದು ತನಿಖೆಯ ನಂತರವೇ ತಿಳಿಯಲಿದೆ. ನನಗೆ ಸರ್ಕಾರದ ತನಿಖೆ ಮೇಲೆ ಪೂರ್ಣ ನಂಬಿಕೆಯಿದೆ. ಇದಕ್ಕಾಗಿ ಎಸ್ಐಟಿ ಅಥವಾ ಬೇರೆ ಯಾವುದೇ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ. ಇಂತಹ ಷಡ್ಯಂತ್ರ ರೂಪಿಸಿದವರ ಉದ್ದೇಶ ಎಂದಿಗೂ ಸಫಲವಾಗುವುದಿಲ್ಲ ಎಂದು ಹೇಳಿದರು.
