ಮೈಸೂರು, ನವೆಂಬರ್ 25: ನಾನೊಂದು ತೀರ ನೀನೊಂದು ಎನ್ನುವಂತಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಕೊನೆಗೂ ಒಂದಾಗಿದ್ದಾರೆ. ಹೌದು…ಮಹದೇವಪ್ಪನವರು ಮುನಿಸು ಮರೆತು ಇಂದು (ನವೆಂಬರ್ 25) ಮೈಸೂರಿನ ಕುವೆಂಪುನಗರದಲ್ಲಿರುವ ಹೊಸ ನಿವಾಸಕ್ಕೆ ಭೇಟಿ ನೀಡಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ಮಾಡಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಈ ಇಬ್ಬರು ನಾಯಕರು ಮುಖಾಮುಖಿ ಭೇಟಿಯಾಗಿರುವುದು ಇದೇ ಮೊದಲು. ಇದರೊಂದಿಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮ್ಮದ್ ಸೇರಿಕೊಂಡು ಮಹದೇವಪ್ಪನವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುನಿಸು ಮರೆತು ಒಂದಾದ ದೋಸ್ತಿ
ನಿವಾಸಕ್ಕೆ ಆಗಮಿಸಿದ ಹೆಚ್.ಸಿ.ಮಹದೇವಪ್ಪನವರಿಗೆ ಸಚಿವ ಯತೀಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದ್ದು, ಬಳಿಕ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಹದೇವಪ್ಪ ಅವರ ಈ ದಿಢೀರ್ ಭೇಟಿ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಲ್ಕು ತಿಂಗಳ ಬಳಿಕ ಇಬ್ಬರೂ ನಾಯಕರು ಮುಖಾಮುಖಿಯಾಗಿ ಚರ್ಚಿಸುತ್ತಿರುವುದು, ಮತ್ತೆ ಅಹಿಂದ ಗ್ಯಾಂಗ್ ಒಂದಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ನಾಳೆ (ನವೆಂಬರ್ 26 ಮೈಸೂರಿನಲ್ಲಿ ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮವು ಅಹಿಂದ ಮತ್ತು ದಲಿತ-ಶೋಷಿತ ವರ್ಗಗಳ ರಾಜಕಾರಣಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಕಾರ್ಯಕ್ರಮದ ಮುನ್ನಾದಿನವೇ ಇಬ್ಬರೂ ಹಿರಿಯ ನಾಯಕರು ಒಂದಾಗಿರುವುದು, ಮುಂದಿನ ದಿನಗಳಲ್ಲಿ ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮುನ್ಸೂಚನೆ ನೀಡಿದೆ.
ಮಹದೇವಪ್ಪನವರು ಸಿದ್ದರಾಂಯ್ಯನವರಿಂದ ಅಂತರ ಕಾಯ್ದುಕೊಂಡು ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಆಯೋಜನೆ ಮಾಡಿದ್ದರು. ಸಿದ್ದರಾಮಯ್ಯನವರಿಗೆ ಆಹ್ವಾನ ನೀಡದೇ ಮಹದೇವಪ್ಪನವರ ಮೈಸೂರಿನಲ್ಲಿ ಸಭೆಗಳ ಮೇಲೆ ಸಭೆ ಮಾಡಿದ್ದರು. ಹೀಗಾಗಿ ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆಯಲೆಂದೇ ಮಹದೇವಪ್ಪನವರು ಸಂವಿಧಾನ ದಿನಾಚರಣೆ ಆಯೊಜಿಸಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಆದ್ರೆ, ಇದೀಗ ಕಾರ್ಯಕ್ರಮಕ್ಕೆ ಒಂದು ದಿನದ ಮುನ್ನವೇ ಇಬ್ಬರು ಸ್ನೇಹಿತರನ್ನು ಸಂವಿಧಾನ ದಿನಾಚರಣೆ ಒಂದಾಗಿಸಿದ್ದು, ನಾಳೆಯ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಲಿದ್ದಾರೆ. ಅಲ್ಲದೇ ಕಾರ್ಯಕ್ರಮದ ಮೂಲಕ ವಿರೋಧಿಗಳಿಗೆ ಸಂದೇಶ ರವಾನಿಸುವ ಸಾಧ್ಯತೆಗಳಿವೆ
