ಮೈಸೂರು, ನವೆಂಬರ್ 03): ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಅಂತಿಮವಾಗಿ ಬೆಳಗಾವಿಯ ಹಿಂಡಲಗಾ ಜೈಲು ಬಾರೋ ಚಳವಳಿ ಆರಂಭಿಸಿದ್ದಾರೆ. ಕೈಗೆ ಸರಪಳಿ ಕಟ್ಟಿಕೊಂಡು ಹಿಂಡಲಗಾ ಜೈಲಿನತ್ತ ಪಾದಯಾತ್ರೆ ನಡೆಸಿದ್ದಾರೆ. ಇನ್ನೊಂದೆಡೆ ಮೈಸೂರಿನಲ್ಲೂ ಸಹ ಕಬ್ಬಿನ ಕಿಚ್ಚು ಜೋರಾಗಿದ್ದು, ಮೈಸೂರು ಸಿದ್ದಾರ್ಥ್ ನಗರದಲ್ಲಿರುವ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ರೈತರು ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ವಿನೂತನ ಧರಣಿ ನಡೆಸಿದ್ದಾರೆ.
