ಮೈಸೂರು : ದಸರಾಗೆ ದಿನಗಣನೆ ಶುರುವಾಗಿದ್ದು, ವಿಶ್ವ ವಿಖ್ಯಾತ ದಸರಾ ಕಣ್ತುಂಬಿಕೊಳ್ಳಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ದಸರಾ ಮಹೋತ್ಸವದ ಕಾರ್ಯಗಳು ಜೋರಾಗಿ ನಡೆದಿವೆ. ಈ ಬಾರಿಯ ದಸರಾ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಶಿಥಿಲಗೊಂಡ ಕಟ್ಟಡ ಮತ್ತು ಮರಗಳಲ್ಲಿ ಕುಳಿತು ಜಂಬೂಸವಾರಿ ವೀಕ್ಷಣೆಗೆ ನಿಷೇಧಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೀಮಾ ಲಾಟ್ಕರ್, ‘ಈ ಬಾರಿಯ ನಾಡ ಹಬ್ಬ ಮೈಸೂರು ದಸರಾಗೆ 5,161 ಸಿವಿಲ್ ಹಾಗೂ ಸಂಚಾರಿ ಪೊಲೀಸರು, 33 ಕೆಎಸ್ಆರ್ಪಿ ತುಕಡಿ, 25 ಡಿಎಆರ್ ತುಕಡಿ, 1500 ಹೋಮ್ ಗಾರ್ಡ್ಗಳು ಸೇರಿದಂತೆ ಆರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಸಾರ್ವಜನಿಕರ ಮೇಲೆ 35,794 ಸಿಸಿ ಕ್ಯಾಮರಾ ಕಣ್ಗಾವಲು
‘ದಸರಾದ 11 ದಿನ ಒಟ್ಟು 18 ಪೊಲೀಸ್ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಅರಮನೆ ಸುತ್ತಮುತ್ತ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇರಲಿದ್ದು, 35,794 ಸಿಸಿ ಕ್ಯಾಮರಾ ಮೂಲಕ ಸಾರ್ವಜನಿಕರ ಮೇಲೆ ಕಣ್ಗಾವಲು ಇರಲಿದೆ’ ಎಂದು ಅವರು ತಿಳಿಸಿದರು.
