ಮೈಸೂರು, ಸೆಪ್ಟೆಂಬರ್ 25 : ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸತೀಶ್ ಜಾರಕಿಹೊಳಿ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಊಹಾಪೋಹಗಳ ನಡುವೆ ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ. ಅವರು ಈಗಲೂ ನಮಗೆ ಆರ್ಮಿ ಕ್ಯಾಪ್ಟನ್. ನಾನು ಅದರ ವೈಸ್ ಕ್ಯಾಪ್ಟನ್, ಯಾರಿಗೂ ಅನುಮಾನ ಬೇಡ ಎಂದು ಸತೀಶ್ ಜಾರಕಿಹೊಳಿ ಅವರೇ ತಿಳಿಸಿದ್ದಾರೆ. ನಾನು, ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ನಾವು ಹಿಂದೆಯೂ ಪ್ರತಿ ಬಾರಿ ಭೇಟಿಯಾಗುತ್ತಿರಲಿಲ್ಲ, ಅವಶ್ಯಕತೆ ಇದ್ದಾಗ ಮೀಟ್ ಆಗುತ್ತಿದ್ದೆವು ಎಂದು ಹೇಳುವ ಮೂಲಕ ಎಲ್ಲ ಗಾಳಿ ಸುದ್ದಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಇಡಿ ದಾಳಿ ನಂತರ ಯತೀಂದ್ರ ನನ್ನನ್ನು ಭೇಟಿಯಾಗಿದ್ದರು. ಮನೆಯಲ್ಲಿ ಒಬ್ಬರು ಸಾಂತ್ವನ ಹೇಳಿದ್ದಾರೆ, ಅದೇ ಸಾಕು. ಮನೆಯಲ್ಲಿ ಎಲ್ಲರೂ ಸಾಂತ್ವನ ಹೇಳಬೇಕೆಂದು ಬಯಸಬಾರದು. ಮದುವೆ, ಗೃಹ ಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಬೇಕೆಂದು ನಿರೀಕ್ಷೆ ಮಾಡಿದರೆ ಹೇಗೆ? ಎಂದು ಸತೀಶ್ ಪ್ರಶ್ನಿಸಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದಿದ್ದು ಅಹಿಂದ ಸಮಾವೇಶ ಅಲ್ಲ. ಅದು ಹಿಂದುಳಿದವರ ಸಮಾವೇಶ. ಸಮಾವೇಶ ಆಯೋಜನೆ ಮಾಡಿದವರು ನನ್ನನ್ನು ಕರೆದಿಲ್ಲ. ಹೀಗಿರುವಾಗ ಯಾಕೆ ನನ್ನನ್ನು ಕರೆದಿಲ್ಲ ಎಂದು ಕೇಳುವುದಕ್ಕೆ ಆಗುತ್ತಾ? ಅಹಿಂದ ಸಂಘಟನೆ ಭದ್ರವಾಗಿದೆ ಎಂದು ಸತೀಶ್ ತಿಳಿಸಿದ್ದಾರೆ.
ಆರ್ಥಿಕ ಇಲಾಖೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದಿಲ್ಲ. ಬಜೆಟ್ನಲ್ಲಿ ನಾವು ಏನು ಘೋಷಣೆ ಮಾಡಿದ್ದೇವೋ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣ ಇದೆ ಎಂದು ಇಲಾಖೆ ಹೇಳಿದೆ. ಹೊಸ ಘೋಷಣೆಗೆ ಹಣ ಹೊಂದಿಸುವುದು ಕಷ್ಟ ಎಂದಿದೆ. ಇದನ್ನು ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತೆ. ಯೋಚನೆ ಮಾಡಿ ಹೊಸ ಘೋಷಣೆ ಮಾಡಿ ಎಂದು ತಿಳಿಸಿದ್ದು, ಅದನ್ನು ನಾವು ಗಮನಿಸುತ್ತೇವೆ. ಕೆಲವೊಂದು ಇಲಾಖೆಗಳಲ್ಲಿ ಹಣ ವೆಚ್ಚವಾಗುವುದಿಲ್ಲ. ಆ ಹಣವನ್ನು ಹೊಸ ಘೋಷಣೆಗಳಿಗೆ ಬಳಸುತ್ತೇವೆ ಎಂದವರು ತಿಳಿಸಿದ್ದಾರೆ.
