ಮಡಿಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸಬಲ್ಲ ದೇಶದ ಪ್ರಜಾತಂತ್ರದ ಹಬ್ಬಕ್ಕೆ ಮತದಾರರು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವುದರಿಂದ ಮತದಾನದ ಪ್ರಮಾಣ ಕುಸಿಯುತ್ತಿದೆ. ಇದು ಅತ್ಯಂತ ವಿಷಾದನೀಯವೆಂದು ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಅವರು, ಈ ದೇಶದ ಪ್ರಜೆಗಳು ಯಾರೇ ಆಗಿರಲಿ ಮತ ಚಲಾಯಿಸದೆ ಇರುವವರಿಗೆ ಯಾವುದೇ ಸರಕಾರಿ ಸೌಲಭ್ಯವನ್ನು ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಉಜ್ವಲ ಭವಿಷ್ಯಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆ ಮತದಾನ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಈ ಬಾರಿಯ ಮಹಾ ಚುನಾವಣೆಯಲ್ಲಿ ಮತದಾರ ತನ್ನ ಜವಾಬ್ದಾರಿಯನ್ನು ಮರೆತಿರುವುದು ಸ್ಪಷ್ಟವಾಗಿದೆ. ಶೇಕಡಾವಾರು ಮತದಾನ ಅಧಿಕವಾಗಲಿ ಎಂದು ಸರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದರೂ ಮತದಾರರು ರಜೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಿರೀಕ್ಷೆಯಷ್ಟು ಮತ ಚಲಾವಣೆಯಾಗದೆ ಇರುವುದೇ ಇದಕ್ಕೆ ಮುಖ್ಯ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಶೇ.53ರಷ್ಟು ಮಾತ್ರ ಮತದಾನವಾಗಿದ್ದು, ಇದು ಮುಜುಗರದ ವಿಚಾರವಾಗಿದೆ. ರಜೆಯನ್ನು ಮೋಜು ಮಸ್ತಿಗಾಗಿ ಯುವ ಮತದಾರರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸಂಶಯವಿದೆ. ಮತದಾನವನ್ನು ಸಂಭ್ರಮಿಸಿದಾಗ ಮಾತ್ರ ದೇಶ ಬದಲಾಗುತ್ತದೆ. ರಾಷ್ಟ್ರಪ್ರೇಮ ಇರುವವರು ಖಂಡಿತವಾಗಿಯೂ ಸೂಕ್ತ ನಾಯಕನನ್ನು ಆಯ್ಕೆ ಮಾಡುತ್ತಾರೆ. ತಾನು ನೀಡುವ ಪ್ರತಿಯೊಂದು ಮತವು ಸದೃಢ ಭಾರತದ ನಿರ್ಮಾಣಕ್ಕೆ ಬುನಾದಿ ಎನ್ನುವುದನ್ನು ಯಾರೂ ಮರೆಯಬಾರದು.
ಇನ್ನು ಮುಂದೆಯಾದರೂ ಸಾರ್ವತ್ರಿಕ ರಜೆ ನೀಡಿದರೂ ಮತ ಚಲಾಯಿಸದೆ ಇರುವವರ ಬಗ್ಗೆ ಕ್ರಮ ಕೈಗೊಳ್ಳುವ ಮತ್ತು ಸರಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಪಿ.ಎಂ.ರವಿ ಒತ್ತಾಯಿಸಿದ್ದಾರೆ. ಫೋಟೋ :: ಪಿ.ಎಂ.ರವಿ
