ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಸಲಹೆ । ಜಿಎಸ್ ಬೆಟ್ಟದ ಮುಂಭಾಗ ಅರಿವು
ಗುಂಡ್ಲುಪೇಟೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಮತದಾನ ಬೆಂಬಲಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ತಿಳಿಸಿದರು.
ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಮುಂಭಾಗ ಗುರುವಾರದಂದು ಜರುಗಿದ ರಥೋತ್ಸವ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಅಂಗವಾಗಿ ಜಿಪಂ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಆಮಿಷಗಳಿಗೆ ಮತದಾರರು ಒಳಗಾಗದೆ ನಿಷ್ಪಕ್ಷಪಾತವಾಗಿ ಮತಚಲಾಯಿಸಬೇಕು ಹಾಗೂ ಮತದಾನ ಇಂದು ಮತ್ತು ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ತನ್ನದೇ ಆದ ಪಾತ್ರವಹಿಸಲಿದೆ ಹಾಗಾಗಿ ಪ್ರತಿಯೊಬ್ಬ ಮತದಾರರು ತಮ್ಮ ಮತವನ್ನು ವ್ಯರ್ಥ ಮಾಡದೆ ಕಡ್ಡಾಯವಾಗಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ಪದ್ಮಿನಿ ಸಾಹು ಮಾತನಾಡಿ, ದೇಶವನ್ನು ಮುನ್ನಡೆಸಲು ಪ್ರತಿಯೊಬ್ಬ ಮತದಾರರ ಒಂದು ಮತ ಬಹಳ ಅಮೂಲ್ಯವಾದದ್ದು, ಹಣದ ಆಸೆಗೆ ಮತ ಮಾರಿಕೊಳ್ಳಬೇಡಿ. ನಿಮಗೆ ಮೂಲಸೌಕರ್ಯ ಒದಗಿಸಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ನಿಮಗಾಗಿ ದುಡಿಯುವ ಓರ್ವ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಒಂದು ಸುವರ್ಣ ಅವಕಾಶ ಇದಾಗಿದ್ದು ಹಾಗಾಗಿ ಪ್ರತಿಯೊಬ್ಬ ಮತದಾರರ ಮತ ಬಹಳ ಅಮೂಲ್ಯವಾಗಿದೆ ಎಂದರು.
ಬಳಿಕ ತಾಲೂಕು ಪಂಚಾಯಿತಿ ಇಓ ರಾಮಲಿಂಗಯ್ಯ ಮತದಾನದ ಪ್ರಾಮುಖ್ಯತೆ ಹಾಗೂ ಮಹತ್ವದ ಬಗ್ಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಸಿಬ್ಬಂದಿಗೆ ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ತಿಳಿಸುವುದರ ಮೂಲಕ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿದರು,
ನಂತರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ “ಮತದಾನದ ಮಮತೆಯ ಕರೆಯೋಲೆ” ಆಹ್ವಾನ ಪತ್ರವನ್ನು ನೀಡಿ ಕಡ್ಡಾಯ ಮತದಾನ ಮಾಡಲು ಮನವಿ ಮಾಡಿದರು.
ತಹಸೀಲ್ದಾರ್ ಮಂಜುನಾಥ, ಮಲೆ ಮಹದೇಶ್ವರ ಹುಲಿ ಯೋಜನೆಯ ನಿರ್ದೇಶಕ ( ಡಿಸಿಎಫ್ ) ಸಂತೋಷ್ ಕುಮಾರ್, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಾದ ಪ್ರಭಾಕರನ್, ಆರ್ ಎಫ್ ಓ ಅಧಿಕಾರಿಗಳಾದ ಮಂಜುನಾಥ್, ದೀಪ, ತಾಲ್ಲೂಕು ವ್ಯಾಪ್ತಿಯ ಎಲ್ಲಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿ.ಇ.ಒ, ಎಂ.ಬಿ.ಕೆ ಮತ್ತು ತಾ ಪಂ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಫೋಟೋ ಇದೆ

