ತುಮಕೂರು : ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದೆ. ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಣೆ ಹಾಕಲಾಗಿದೆ. ಹೆಗಡೆ ಅವರಿಗೆ ಟಿಕೆಟ್ ತಪ್ಪಲು ಸಂವಿಧಾನ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಕೂಡ ಇದೇ ಕಾರಣವನ್ನು ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ವಿ ಸೋಮಣ್ಣ, ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಿದೆ. ಸಂವಿಧಾನವನ್ನು ಅಪಮಾನಿಸಿದರೆ ಅದಕ್ಕಿಂತ ಬೇರೆ ಪಾಪವಿಲ್ಲ. ಆದರೆ, ಕಾಂಗ್ರೆಸ್ನವರು ಕೆಲವ ವಿಚಾರ ತಿರುಚುತ್ತಾರೆ. ಹೆಗಡೆ ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ಅಂಥಹ ಪುಣ್ಯಾತ್ಮ ಅಂಬೇಡ್ಕರ್ ಅವರ ಸಂಸ್ಕಾರಕ್ಕೇ ಕಾಂಗ್ರೆಸ್ನವರು ಜಾಗ ಕೊಟ್ಟಿಲ್ಲ. ಕಾಂಗ್ರೆಸ್ನವರಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಅಂತಾ ಯಾರೂ ಹೇಳಿಲ್ಲ. ಹೆಗಡೆ ಅವರು ತಮ್ಮ ಸ್ವಂತ ಅಭಿಪ್ರಾಯ ಎಂದಿದ್ದಾರೆ. ಅದಕ್ಕೆ ಅವರಿಗೆ ಶಿಕ್ಷೆ ಕೂಡ ಆಗಿದೆ ಎಂದರು.
