ಸಿದ್ದರಾಮಯ್ಯ (Siddaramaiah) ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ತವರು ಜಿಲ್ಲೆಯ ವಿಶ್ವವಿಖ್ಯಾತ ಮೈಸೂರು ದಸರಾವನ್ನು (Mysore Dasara 2023) ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದರು. ಆದ್ರೆ, ಸರಿಯಾದ ಸಮಯಕ್ಕೆ ಮಳೆಯಾಗದಿದ್ದರಿಂದ ಕರ್ನಾಟಕದಲ್ಲಿ ಬರ ಆವರಿಸಿದೆ. ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅದ್ಧೂರಿ ದಸರಾ ಕೈಬಿಟ್ಟು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಿದೆ. ಹೀಗಾಗಿ ಸರ್ಕಾರದಿಂದ ಕಡಿಮೆ ಅನುದಾನ ಸಿಗಬಹುದೆಂದು ಜಿಲ್ಲಾಡಳಿತ ಪ್ರಾಯೋಜಕತ್ವದ ಮೊರೆ ಹೋಗಿದೆ.
3 ಕೋಟಿ ರೂಪಾಯಿಗೆ ನಾಡಹಬ್ಬ ದಸರೆಯ ಟೈಟಲ್ ಪ್ರಾಯೋಜಕತ್ವ ನೀಡಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ಪ್ರಾಯೋಜಕತ್ವ ಸಂಬಂಧ ಲಲಿತ್ ಮಹಲ್ ಹೋಟೆಲ್ನಲ್ಲಿ ನಡೆದ ವಾಣಿಜ್ಯೋದ್ಯಮಿಗಳೊಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರು ಪ್ರಾಯೋಜಕತ್ವಗಳ ಬಗ್ಗೆ ಎಲ್ಲಾ ಅಂಶಗಳನ್ನು ವಿವರಿಸಿದ್ದಾರೆ.
ನಾಡಹಬ್ಬ ಟೈಟಲ್ ಪಡೆದರೆ 3 ಕೋಟಿ ರೂಪಾಯಿ, ಪ್ರಯೋಜಕತ್ವದ ವಿವಿಧ ವಿಭಾಗಗಳಾದ ಪ್ಲಾಟಿನಂಗೆ 1 ಕೋಟಿ ರೂ. ಗೋಲ್ಡ್ಗೆ 50 ಲಕ್ಷ ರೂ. ಬೆಳ್ಳಿಗೆ 25 ಲಕ್ಷ ರೂ. ಅಸೋಸಿಯೇಟ್ ಮತ್ತು ಈವೆಂಟ್ ಸ್ಪಾನ್ಸರ್ಗೆ 3 ಲಕ್ಷ ರೂ. ಫಿಕ್ಸ್ ಮಾಡಲಾಗಿದ್ದು, ಪ್ರಾಯೋಜಕತ್ವ ನೀಡುವವರಿಗೆ ದಸರಾ ಕಾರ್ಯಕ್ರಮಗಳಲ್ಲಿ ಅವರ ಕಂಪನಿಯ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದೆ.
ಪ್ರಾಯೋಜಕತ್ವ ನೀಡುವವರು ಇಂದು (ಅಕ್ಟೋಬರ್ 6 ಮಧ್ಯಾಹ್ನ 12ರೊಳಗೆ ಮಾಹಿತಿ ನೀಡಬೇಕೆಂದು ಎಂದು ಜಿಲ್ಲಾಧಿಕಾರಿಗಳು ಸಮಯ ನೀಡಿದ್ದಾರೆ. ಕಂಪನಿಗಳು, ಉದ್ಯಮಿಗಳು ಪ್ರಾಯೋಜಕತ್ವ ವಹಿಸಲು ಅವಕಾಶ ಇದೆ. ಪೂರ್ಣ ಕಾರ್ಯಕ್ರಮ, ಒಂದು ದಿನ ಅಥವಾ ಒಂದು ಕಾರ್ಯಕ್ರಮ ಹೀಗೆ ಯಾವ ರೀತಿಯಾದರೂ ಪ್ರಯೋಜಕತ್ವ ನೀಡಬಹುದಾಗಿದೆ ಎಂದು ಡಿಸಿ ವಿವರಿಸಿದ್ದಾರೆ.
- ಜಾಹೀರಾತು -
ಕಳೆದ ವರ್ಷ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಒಟ್ಟು 26 ಕೋಟಿ ರೂ. ಖರ್ಚಾಗಿತ್ತು. ಈ ವರ್ಷವೂ 30 ಕೋಟಿ ರೂ. ವೆಚ್ಚದಲ್ಲಿ ದಸರಾ ಮಹೋತ್ಸ ವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದ್ರೆ, ಬರ ಆವರಿಸಿದ್ದರಿಂದ ಸರಳವಾಗಿ ಆಚರಿಸಲು ತೀರ್ಮಾನಿಸಿದೆ.