

ಪ್ರತಿನಿಧಿ ವರದಿ ಚಾಮರಾಜನಗರ
ಕಳೆದ 15ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ಅವಳಿ ಜಲಾಶಗಳಾದ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಹರ್ಷ ತಂದಿದೆ.
ಚಿಕ್ಕಹೊಳೆ ಜಲಾಶಯ 2474 ಅಡಿಗಳ ಗರಿಷ್ಟ ಮಟ್ಟವಿದ್ದು, ಪ್ರಸ್ತುತ 539 ಕ್ಯೂಸೆಕ್ಸ್ ಒಳಹರಿವು ಜಲಾಶಯಕ್ಕೆ ಹರಿದು ಬರುತ್ತಿದ್ದು, 2459 ಅಡಿಗಳನ್ನು ತಲುಪಿದೆ. ಸುವರ್ಣಾವತಿ ಜಲಾಶಯ 2454 ಗರಿಷ್ಟಮಟ್ಟವಿದ್ದು, ಪ್ರಸ್ತುತ 278 ಕ್ಯೂಸೆಕ್ಸ್ ಒಳಹರಿವು ಜಲಾಶಯಕ್ಜೆ ಹರಿದು ಬರುತ್ತಿದ್ದು, 2434 ಅಡಿಗಳನ್ನು ತಲುಪಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಶೇ.90ರಷ್ಟು ಭರ್ತಿಯಾಗಿತ್ತು. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಮಳೆಯಾಗದೆ ಹಾಗೂ ಅತಿಯಾದ ಬಿಸಿಲಿನಿಂದ ಎರಡು ಜಲಾಶಯಗಳು ಖಾಲಿಯಾಗಿದ್ದವು. ಆದರೆ ಕಳೆದ 15 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿರುವುದರಿಂದ ಸಂಪೂರ್ಣ ಭರ್ತಿಯಾಗುವ ಮನ್ಸೂಚನೆ ನೀಡಿದೆ.
ಪ್ರಸ್ತುತ ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಲಾಗುತ್ತದೆಯೋ ಹೊರತು ಕೃಷಿ ಉದ್ದೇಶಕ್ಕಾಗಿ ನಾಲಾಗಳಿಗೆ ಹರಿಸುತ್ತಿಲ್ಲ. ಎರಡು ಜಲಾಶಯಗಳು ಸಂಪೂರ್ಣ ಭರ್ತಿಯಾದ ನಂತರ ಕೃಷಿಗೆ ನೀರು ಬಿಡುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳ ತಾಂತ್ರಿಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
