ಮಾದಿಗ ಸಮುದಾಯ ಆಗ್ರಹ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಮಾದಿಗ ಸಮುದಾಯ ರಾಷ್ಟ್ರೀಯ ನಾಯಕರಾಗಿರುವ ಕೆ.ಎಚ್.ಮುನಿಯಪ್ಪ ಅವರು ಸೂಚಿಸಿದವರನ್ನು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಬೇಕು, ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ
ಇದರ ಪರಿಣಾಮ ಎದುರಿಸಬೇಕಾಗುವುದು ಎಂದು ಸಮುದಾಯದ ಮುಖಂಡರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು.
ಕಾಂಗ್ರೆಸ್‌ನ ಯುವ ಮುಖಂಡ ಪಟ್ರೇನಹಳ್ಳಿ ಕೃಷ್ಣ ಮಾತನಾಡಿ, ಪರಿಶಿಷ್ಟರಲ್ಲಿ ಎಡಗೈ, ಬಲಗೈಯೆಂಬ ಬೇಧವಿಲ್ಲ. ಆದರೆ ಇತ್ತೀಚಿಗೆ ಕೆಲ ಕಾಂಗ್ರೆಸ್ಸಿಗರು ತಮ್ಮ ಹಿತಾಸಕ್ತಿಗಾಗಿ ಎಡ, ಬಲ ಎಂಬ ತಾರತಮ್ಯ ಸೃಷ್ಟಿಸಿ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಯಾವುದೇ ಕಾರಣಕ್ಕೂ ಅಂತಹವರಿಗೆ ಮಣೆ ಹಾಕಬಾರದು ಎಂದು ನುಡಿದರು.
ಕೋಲಾರ ಕ್ಷೇತ್ರದಲ್ಲಿ ೭ ಬಾರಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿರುವ ಕೆ.ಎಚ್.ಮುನಿಯಪ್ಪ ಅವರು, ಕೆಲವರ ಪಿತೂರಿಯಿಂದಾಗಿ ಸೋಲಬೇಕಾಯಿತು. ನಂತರ ಪಕ್ಷದ ವರಷ್ಠರು ತಿಳಿಸಿದಂತೆ ರಾಜ್ಯ ರಾಜಕಾರಣಕ್ಕೆ ಬಂದ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್‌ನ ಮತಗಳಿಕೆಯ ಪ್ರಮಾಣವೂ ಹೆಚ್ಚಾಗಿದೆ ಎಂದರು.
ಕೋಲಾರ ಕ್ಷೇತ್ರದ ಪ್ರತಿಯೊಂದು ಬೂತ್‌ನ ಅರಿವು ಹೊಂದಿರುವ ಕೆ.ಎಚ್.ಮುನಿಯಪ್ಪ ಅವರು ಸೂಚಿಸುವವರಿಗೆ ಕ್ಷೇತ್ರದ ಟಿಕೆಟ್ ನೀಡಿದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಲಿದೆ. ಈ ನಿಟ್ಟಿನಲ್ಲಿ ಕೆ.ಎಚ್.ಮುನಿಯಪ್ಪ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್ ನೀಡಿ ಸಾಮಾಜಿಕನ್ಯಾಯ ಒದಗಿಸಬೇಕು. ಅಲ್ಲದೇ ರಾಜೀನಾಮೆ ನೀಡುವ ಬೆದರಿಕೆ ಒಡ್ಡುವ ನಾಯಕರು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದರು.
ಮುಖಂಡ ದಿನ್ನೆಹೊಸಹಳ್ಳಿ ಎಂ.ಪೆದ್ದಣ್ಣ ಮಾತನಾಡಿ, ಪರಿಶಿಷ್ಟರ ಒಗ್ಗಟ್ಟು ಒಡೆಯುವ ಉದ್ದೇಶದಿಂದಲೇ ಕೆಲ ರಾಜಕಾರಣಿಗಳು ಟಿಕೆಟ್ ಘೋಷಣೆ ಮಾಡುವ ಸಂದರ್ಭದಲ್ಲಿ ಎಡ ಬಲ ಎಂಬ ಬೇಧ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದ ಕೆ.ಎಚ್.ಮುನಿಯಪ್ಪ ಅವರು ಸೂಚಿಸುವವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯ ನಾಯಕ ಮುನಿಕೃಷ್ಣಪ್ಪ ಮಾತನಾಡಿ, ರಾಜ್ಯದ ಮೀಸಲುಕ್ಷೇತ್ರದಲ್ಲಿ ಇಲ್ಲದ ಕಗ್ಗಂಟು ಕೋಲಾರ ಕ್ಷೇತ್ರದಲ್ಲಿ ಮಾತ್ರ ಹುಟ್ಟುಹಾಕುತ್ತಿದ್ದು, ನೊಂದಸಮುದಾಯಕ್ಕೆ ಟಿಕೆಟ್ ನೀಡಬೇಕು. ಈಗಾಗಲೇ ಕಾಂಗ್ರೆಸ್‌ನಲ್ಲಿ ಮಗ, ಸಂಬಂಧಿಕರಿಗೆ ಟಿಕೆಟ್ ನೀಡಿರುವಾಗ ಕೋಲಾರದಲ್ಲಿ ಮಾತ್ರ ತಾರತಮ್ಯ ಮಾಡುವುದು ಸರಿಯಲ್ಲ. ಕೆ.ಎಚ್ ಬಣಕ್ಕೆ ಟಿಕೆಟ್ ನೀಡಬೇಕು. ಟಿಕೆಟ್ ವಂಚನೆ ಮಾಡಿದರೆ ಸಮುದಾಯವು ಸಿಡಿದೇಳುವುದೆಂದು ಎಚ್ಚರಿಸಿದರು.
ಸಿ.ಎನ್.ಮುರಳಿ, ಮಂಜುನಾಥ್, ಎಚ್.ಮಹದೇವಪ್ಪ, ರಮಣ್ ಅಕೇಶ್, ವೆಂಕಟಲಕ್ಷ್ಮಮ್ಮ, ಮಂಚನಬಲೆ ಪ್ರಕಾಶ್, ಡ್ಯಾನ್ಸ್ ಶ್ರೀನಿವಾಸ್, ಪ್ರಕಾಶ್, ಶ್ರೀಧರ್, ನಂದೀಶ್, ವಡ್ರೇಪಾಳ್ಯ ಮೂರ್ತಿ, ತಿಪ್ಪೇನಹಳ್ಳಿ ಮುನಿರಾಜು, ಪ್ರಭಾಕರ್, ಶ್ರೀಕಾಂತ್, ನಾಗೇಶ್, ಗಜೇಂದ್ರ, ವಿ.ಸುರೇಶ್, ಎಸ್.ಮುರಳಿ ಇದ್ದರು.

