ಬೆಂಗಳೂರು: ನ್ಯಾಯಾಲಯದ ಕಲಾಪ ನಡೆಯತ್ತಿರುವ ವೇಳೆ ನ್ಯಾಯಮೂರ್ತಿಗಳ ಎದುರೇ ವ್ಯಕ್ತಿಯೊಬ್ಬ ಸರ್ಜಿಕಲ್ ಬ್ಲಡ್‌ನಿಂದ (ರೇಜರ್) ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ಹೈಕೋರ್ಟ್‌ನಲ್ಲಿ ನಡೆದಿದೆ.
ಮೈಸೂರಿನ ವಿಜಯನಗರ ನಿವಾಸಿ ಚಿನ್ನಂ ಶ್ರೀನಿವಾಸ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಶ್ರೀನಿವಾಸ್‌ರನ್ನು ವಶಕ್ಕೆ ಪಡೆದ ಪೊಲೀಸರು ಆ್ಯಂಬುಲೆನ್ಸ್‌ನಲ್ಲಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಅನ್ನನಾಳದ ಅಕ್ಕಪಕ್ಕದ ರಕ್ತನಾಳಗಳು ಕತ್ತರಿಸಿ ಹೋಗಿರುವುದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದಿಲ್ಲ. ಹೈಕೋರ್ಟ್ ಭದ್ರತಾ ವಿಭಾಗದ ಇನ್ಸ್‌ಪೆಕ್ಟರ್ ನೀಡಿದ ದೂರಿನ ಮೇಲೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
