ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಅಳಿಸುವೆ
*ಪತ್ರಕರ್ತರೊಡನೆ ಸಂವಾದದಲ್ಲಿ ಸುನೀಲ್‍ಬೋಸ್ ಭರವಸೆ
ಪ್ರತಿನಿಧಿ ವರದಿ ಚಾಮರಾಜನಗರ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭೆ ಕ್ಷೇತ್ರದಿಂದ ನಾನು ಸಂಸದನಾಗಿ ಆಯ್ಕೆಯಾದರೆ ಎಲ್ಲ ಶಾಸಕರ ಜತೆಗೂಡಿ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಅಳಿಸುವ ಕೆಲಸ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‍ಬೋಸ್ ಭರವಸೆ ನೀಡಿದರು.
ಬೆಂಗಳೂರು-ಕನಕಪುರ-ಚಾಮರಾಜನಗರ ರೈಲು ಯೋಜನೆ ಆರಂಭಿಸಬೇಕಿದೆ. ಉದ್ಯೋಗ ಸೃಷ್ಟಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಮತ್ತು ವಿವಿಧ ಕಾರ್ಖಾನೆಗಳ ಪ್ರಾರಂಭಕ್ಕೆ ಆದ್ಯತೆ ನೀಡುತ್ತೇವೆ. ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಕ್ಷೇತ್ರದ ಅಭಿವೃದ್ಧಿಗೆ ನನ್ನದೆ ಆದ ಕಾರ್ಯಕ್ರಮಗಳಿವೆ ಎಂದು ಪತ್ರಕರ್ತರೊಡನೆ ನಡೆದ ಸಂವಾದದಲ್ಲಿ ತಿಳಿಸಿದರು.
ನನ್ನ ಗೆಲುವಿಗೆ ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳು ಬಲ ತುಂಬಲಿವೆ. ಅಲ್ಲದೆ ಕಳೆದ 10 ವರ್ಷಗಳ ಕಾಲ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಹೇಳಿರುವ ಸುಳ್ಳುಗಳಿಂದ ಜನರು ಬೇರಸಗೊಂಡಿದ್ದಾರೆ. ಈ ಬಾರಿ ಜನರು ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 18 ವರ್ಷದಿಂದ ನಾನು ತಿ.ನರಸೀಪುರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ಕ್ಷೇತ್ರದ ಜನರಿಗೆ ಸಿಗದಿದ್ದರೆ ಹಾಗೂ ಒಡನಾಟ ಹೊಂದಿಲ್ಲದಿದ್ದರೆ ನನ್ನ ತಂದೆ ಎಚ್.ಸಿ.ಮಹದೇವಪ್ಪ ಅವರು 4 ಬಾರಿ ಗೆಲ್ಲುತ್ತಿದ್ದರೇ ಹಾಗೂ ಪ್ರಮುಖ ಖಾತೆಗಳ ಸಚಿವರಾಗುತ್ತಿದ್ದರೆ. ನಮ್ಮ ರಾಜಕೀಯ ವಿರೋಧಿಗಳು ಹೀಗೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಕ್ಷೇತ್ರದ ಎಲ್ಲ ಕಡೆಯಲ್ಲೂ ಅಭಿವೃದ್ದಿ ಕೆಲಸ ಮಾಡುತ್ತೇನೆ. ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗುವುದಿಲ್ಲ. ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಅವರು ಯಾವ ರೀತಿ ಅಭಿವೃದ್ದಿ ಕೆಲಸ ಮಾಡಬೇಕೆಂದು ತೋರಿಸಿಕೊಟ್ಟು ಹೋಗಿದ್ದಾರೆ. ಅವರನ್ನು ಹಾದಿಯಲ್ಲಿ ನಡೆಯುತ್ತೇನೆ ಎಂದು ಹೇಳಿದರು.
ಕ್ಷೇತ್ರದ ಎಲ್ಲ ಕಡೆಯಲ್ಲೂ ಕಾಂಗ್ರೆಸ್‍ಗೆ ಉತ್ತಮ ವಾತಾವರಣವಿದೆ. 1991ರಲ್ಲಿ ನನ್ನ ತಂದೆ ಎಚ್.ಸಿ.ಮಹದೇವಪ್ಪ ಅವರು ಇದೇ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಅವರು ಸಚಿವರಾಗಿ ಜಿಲ್ಲೆಯ ಅಭಿವೃದ್ದಿಗೆ ಕೆಲಸಗಳನ್ನು ಮಾಡಿ ಎಲ್ಲ ಕಡೆ ಪರಿಚಿತರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ನಾನು ಜನರಿಗೆ ಪರಿಚಯವಿದ್ದೇನೆ. ಜಿಲ್ಲೆಯಲ್ಲಿಯೂ ನಾನು ಈಗ ಓಡಾಡಿ ಜನರಿಗೆ ಹತ್ತಿರವಾಗುತ್ತಿದ್ದೇನೆ ಎಂದರು.
ಹಾಲಿ ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರು ನನಗೆ ಆಶೀರ್ವಾದ ಮಾಡಿದ್ದು, ನನಗೆ ಶಕ್ತಿ ಬಂದಿದೆ. ಅವರ ಬೆಂಬಲಿಗರು ಸಹ ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆಯು ಪ್ರಸಾದ್ ಅವರಿಂದ ನಮಗೆ ಬೆಂಬಲವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸುನೀಲ್ ಹೇಳಿದರು.
ಆರ್.ಧ್ರುವನಾರಾಯಣ ಅವರ ಹೆಸರೇಳಲು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅವರಿಗೆ ನೈತಿಕತೆಯಿಲ್ಲ. ಧ್ರುವ ಅವರು ನಿಧನರಾದಾಗ ಅವರ ಮಗ ದರ್ಶನ್ ಪರ ನಂಜನಗೂಡು ಕ್ಷೇತ್ರದಲ್ಲಿ ಕೆಲಸ ಮಾಡದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ನಮ್ಮ ತಂದೆ ಹೆಸರನ್ನು ಬಳಸಕೂಡದು ಎಂದು ದರ್ಶನ್ ಕೂಡ ತಾಕೀತು ಮಾಡಿದ್ದಾರೆ ಎಂದರು.
ಬಿಜೆಪಿ ಮುಖಂಡರು ತಮ್ಮ ಸಾಧನೆಗಳನ್ನು ಹೇಳಿಕೊಂಡು ಮತ ಕೇಳಬೇಕು. ಜನರ ಎದುರು ಹೇಳಿಕೊಳ್ಳುವ ಅಂತಹ ಯಾವುದೇ ಸಾಧನೆಗಳನ್ನು ಅವರು ಮಾಡಿಲ್ಲ. ಆದ್ದರಿಂದ ಅವರು ಹತಾಶರಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜ, ಪ್ರಧಾನ ಕಾರ್ಯದರ್ಶಿ ಪ್ರಸಾದ್‍ಲಕ್ಕೂರು, ಪತ್ರಕರ್ತರು ಇದ್ದರು.
13ಸಿಎಚ್ಎನ್.1:
ಚಿತ್ರ ವಿದೆ
