
* ಸಭೆಯಲ್ಲಿ ಸಾಮಾನ್ಯ ವೀಕ್ಷಕ ಪಿ.ಸಿ.ಮೀನಾ ಸೂಚನೆ
ಪ್ರತಿನಿಧಿ ವರದಿ ಚಾಮರಾಜನಗರ
ಲೋಕಸಭಾ ಚುನಾವಣೆಯನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಜಾರಿಯಾಗಿರುವ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚಾ.ನಗರ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಪಿ.ಸಿ.ಮೀನಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ-2024ರ ಸಂಬಂಧದ ವಿವಿಧ ಪ್ರಕ್ರಿಯೆಗಳ ಕುರಿತು ಪೂರ್ವ ಸಿದ್ದತೆಗಳ ಬಗ್ಗೆ ಜಿಲ್ಲಾ ಹಾಗೂ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟೆಚ್ಚೆರ ವಹಿಸಬೇಕು. ಚುನಾವಣಾ ಅಕ್ರಮಕ್ಕೆ ಕಾರಣವಾಗುವಂತಹ ಯಾವುದೇ ಪ್ರಕರಣಗಳಿಗೆ ಕಂಡು ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ವೆಚ್ಚ ವೀಕ್ಷಕರಾದ ಎಂ.ಮೋಹನ್ ಬಾಬು ಮಾತನಾಡಿ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವೆಚ್ಚದ ಬಗ್ಗೆ ಪ್ರತಿದಿನ ನಿಗಾ ವಹಿಸಿ ವರದಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಎಸ್.ಎಸ್.ಟಿ ಹಾಗೂ ಎಸ್.ಎಫ್.ಟಿ ತಂಡ, ಇನ್ನಿತರೆ ತಂಡಗಳು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಎಂದರು.
ಪ್ರತಿದಿನದ ಚುನಾವಣಾ ವೆಚ್ಚದ ವರದಿ ನೀಡಬೇಕು. ಅಧಿಕೃತವಾಗಿ ಮದ್ಯ ಸಾಗಾಣಿಕೆ ಬಗ್ಗೆ ವಿವಿಧ ತಂಡಗಳು ಹೆಚ್ಚು ಗಮನ ಹರಿಸಬೇಕು. ಸೂಕ್ಷ್ಮ ಸ್ಥಳಗಳಲ್ಲಿರುವ ಮದ್ಯದ ಅಂಗಡಿಗಳನ್ನು ಪಟ್ಟಿ ಮಾಡಿಕೊಂಡು ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಸಾಗಣೆ, ಸಂಗ್ರಹಣೆಯಾಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ವಿವಿಧ ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಅನುಮತಿ ನೀಡಲು ತೆರೆಯಲಾಗಿರುವ ಏಕಗವಾಕ್ಷಿ ಕೇಂದ್ರ ನಿರ್ವಹಣೆಯ ಬಗ್ಗೆಯೂ ಸಹ ನಿಗಾ ವಹಿಸಬೇಕು. ಸಾಮಾನ್ಯ ಹಾಗೂ ವೆಚ್ಚ ವೀಕ್ಷಕರು ನೀಡಿರುವ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಎಸ್ಪಿ ಪದ್ಮಿನಿ ಸಾಹು, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಇತರರು ಸಭೆಯಲ್ಲಿದ್ದರು.
10ಸಿಎಚ್ಎನ್.2:
ಚಿತ್ರವಿದೆ
