ಮಂಡ್ಯ : ಸುಮಲತಾ ಅವರಿಗೆ ರಾಜಕಾರಣದಲ್ಲೂ ಅಪಾರ ಜ್ಞಾನವಿದೆ, ಅವರಿಗಿರುವಷ್ಟು ತಿಳುವಳಿಕೆ ನನಗಿಲ್ಲ ಎಂದು ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಚಲುವರಾಯಸ್ವಾಮಿ, ಸುಮಲತಾ ಅವರು ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಲು ಭಗೀರಥ ಪ್ರಯತ್ನ ನಡೆಸಿದ್ದಾರೆ, ಹಾಗಿರುವಾಗ ಮೇಡಂ ಮತ್ತೊಬ್ಬ ಆಕಾಂಕ್ಷಿಯನ್ನು ಶಿಫಾರಸ್ಸು ಮಾಡೋಕಾಗುತ್ತಾ ಎಂದು ಪ್ರಶ್ನಿಸಿದರು. ಚಲುವರಾಯಸ್ವಾಮಿ ಅವರು ಬಹಳ ವರ್ಷಗಳಿಂದ ಬೆಂಗಳೂರಲ್ಲಿರುವುದರಿಂದ ಅವರಿಗೆ ನಾಟಿ ಕೋಳಿ ರುಚಿ ಗೊತ್ತಿಲ್ಲ ಅಂತ ಸುಮಲತಾ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ತನಗೇನೂ ಗೊತ್ತಿಲ್ಲ, ಅವರು ಬಹಳ ವರ್ಷಗಳ ಕಾಲ ಕಲಾವಿದೆಯಾಗಿದ್ದವರು, ಅಂಬರೀಶ್ ಜೊತೆ ದೀರ್ಘ ಸಮಯದವರೆಗೆ ಕಲಾಸೇವೆ ಮಾಡಿ ಈಗ ಸಂಸದೆಯಾಗಿ ರಾಜಕಾರಣದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ, ಹಾಗಾಗಿ ಅವರಷ್ಟು ತನಗೆ ಗೊತ್ತಿಲ್ಲ ಎಂದು ಹೇಳಿದರು. ನಿನ್ನೆ ಕಾಂಗ್ರೆಸ್ ಮುಖಂಡರನ್ನು ತೀವ್ರವಾಗಿ ಟೀಕಿಸಿರುವ ಡಾ ರವೀಂದ್ರ ಅವರ ಬಗ್ಗೆ ತಾನು ಕಾಮೆಂಟ್ ಮಾಡಲ್ಲ ಎಂದು ಚಲುವರಾಯಸ್ವಾಮಿ, ಅವರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು.
