ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳೆಯಬಹುದು ಎಂದು ಎಲ್ಲಾ ತಜ್ಞ ಸಂಸ್ಥೆಗಳೂ ಹೇಳುತ್ತಿವೆ. ಅಮೆರಿಕದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ (S&P Global Ratings) ಈ ಹಣಕಾಸು ವರ್ಷಕ್ಕೆ ಮಾಡಿದ ಅಂದಾಜು ಕೂಡ ಈ ಅಭಿಪ್ರಾಯವನ್ನು ಪುರಸ್ಕರಿಸುತ್ತದೆ. ಇದರ ಪ್ರಕಾರ ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.4ರಷ್ಟು ಬೆಳೆಯಬಹುದು. ಹೆಚ್ಚುತ್ತಿರುವ ಆಹಾರ ಹಣದುಬ್ಬರ, ಕಡಿಮೆ ಆಗುತ್ತಿರುವ ರಫ್ತಿನ ನಡುವೆಯೂ ಭಾರತದ ಜಿಡಿಪಿ ಉತ್ತಮವಾಗಿ ಬೆಳೆಯಲು ದೇಶೀಯವಾಗಿ ಇರುವ ಬೇಡಿಕೆ ಕಾರಣ ಎಂದು ಹೇಳಲಾಗಿದೆ.
ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ನ ಈ ಹಿಂದಿನ ಅಂದಾಜಿನಲ್ಲಿ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಅಂದಾಜನ್ನು ಪರಿಷ್ಕರಿಸಿದ್ದು, ನಿರೀಕ್ಷೆ ಹೆಚ್ಚಿಸಲಾಗಿರುವುದು ಗಮನಾರ್ಹ. ಆದರೆ, ಈ ಹಣಕಾಸು ವರ್ಷದ ದ್ವಿತೀಯಾರ್ಧ, ಅಂದರೆ, 2023ರ ಅಕ್ಟೋಬರ್ನಿಂದ 2024ರ ಮಾರ್ಚ್ವರೆಗಿನ ಅರ್ಧವಾರ್ಷಿಕ ಅವಧಿಯಲ್ಲಿ ಆರ್ಥಿಕತೆ ಕುಂಠಿತಗೊಳ್ಳಬಹುದು. ಇಲ್ಲದೇ ಹೋಗಿದ್ದರೆ ಇನ್ನೂ ಹೆಚ್ಚಿನ ವೃದ್ಧಿ ಸಾಧ್ಯತೆ ಇರುತ್ತಿತ್ತು. ಜೊತೆಗೆ ಮುಂದಿನ ಹಣಕಾಸು ವರ್ಷದ ಬೆಳವಣಿಗೆಯ ವೇಗಕ್ಕೂ ಇದೇ ಅಂಶ ಕಡಿವಾಣ ಹಾಕಬಹುದು ಎಂದು ಈ ಅಮೆರಿಕನ್ ರೇಟಿಂಗ್ ಏಜೆನ್ಸಿ ಹೇಳಿದೆ.
ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಮುಂದಿನ ಹಣಕಾಸು ವರ್ಷ, ಅಂದರೆ 2024-25ರ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.9ರಷ್ಟು ಬೆಳೆಯಬಹುದು ಎಂದು ಈ ಹಿಂದಿನ ಅಂದಾಜಿನಲ್ಲಿ ಅಭಿಪ್ರಾಯಪಟ್ಟಿತ್ತು. ಆದರೆ, ಹೊಸ ಅಂದಾಜು ಪ್ರಕಾರ ಜಿಡಿಪಿ ಶೇ. 6.4ರಷ್ಟು ಮಾತ್ರವೆ ಬೆಳೆಯಬಹುದು ಎಂದಿದೆ.
2022-23ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.2ರಷ್ಟು ಬೆಳೆದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತದ್ದು ಹೆಚ್ಚಿನ ವೇಗ. ಮುಂದಿನ ಎರಡು ವರ್ಷವೂ ಭಾರತವೇ ಹೆಚ್ಚಿನ ಜಿಡಿಪಿ ಬೆಳವಣಿಗೆ ಕಾಣುವುದು ಎನ್ನಲಾಗಿದೆ. ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದಿದೆ. ಎರಡನೇ ಕ್ವಾರ್ಟರ್ನ ವರದಿ ನವೆಂಬರ್ 30ರಂದು ಬರುವ ನಿರೀಕ್ಷೆ ಇದೆ. ವಿವಿಧ ಆರ್ಥಿಕ ತಜ್ಞರು ಈ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 6.5ರ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಿರುವುದು ವಿಶೇಷ.
