ಪ್ರತಿನಿಧಿ ವರದಿ ಹುಲ್ಲಹಳ್ಳಿ
ಸಮೀಪದ ಕಾರ್ಯ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಬುಧವಾರ ಬೆಳಗಿನ ಜಾವ 5. 30ರ ಸಮಯದಲ್ಲಿ ಜರುಗಿತು.
ಸಂಗಮ ಕ್ಷೇತ್ರದ ಶ್ರೀ ಕಾರ್ಯಸ್ವಾಮಿ ಮಠದ ಅಧ್ಯಕ್ಷರಾದ ಶ್ರೀ ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪುಣ್ಯಹ, ನಾಂದಿ, ಪಂಚ ಕಳಸ ಸ್ಥಾಪನೆ ಹಾಗೂ ಪರಿವಾರ ದೇವತಾ ಪೂಜೆ, ಗಣಪತಿ ಹೋಮ, ವರಗುರು ಶ್ರೀ ವೀರಭದ್ರೇಶ್ವರಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಹಾಗೂ ಕೊಂಡೋತ್ಸವ ಕಾರ್ಯಕ್ರಮ ನೆರವೇರಿದವು.
ಶ್ರೀ ವೀರಭದ್ರಸ್ವಾಮಿ ಮೂರ್ತಿಗೆ ವಿವಿಧ ಬಗೆಯ ಹೂ ಮತ್ತು ಹಣ್ಣುಗಳಿಂದ ಅಲಂಕೃತಗೊಳಿಸಿ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರಗಳೊಂದಿಗೆ ವೀರಗಾಸೆ ಕುಣಿತ, ಮಂಗಳವಾದ್ಯ ಮತ್ತು ವಿವಿಧ ತಂಡಗಳೊಂದಿಗೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ನಂತರ ವಿವಿಧ ಭಾಗಗಳಿಂದ ಕೊಂಡೋತ್ಸವ ಮತ್ತು ರಥೋತ್ಸವ ನೋಡಲು ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

