ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಮಾಜಿ ಸಚಿವ ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬಗ್ಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬೇಸರ ಹೊರ ಹಾಕಿರುವ ಪ್ರಸಂಗ ನಡೆದಿದೆ. ಗುರುಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಸಿದ್ಧತೆಯನ್ನು ವೀಕ್ಷಿಸಲು ಆಗಮಿಸಿದ್ದ ವಿ.ಸೋಮಣ್ಣ ಅವರು ಖುದ್ದು ಸಿದ್ಧಲಿಂಗ ಸ್ವಾಮೀಜಿ ಬಳಿ ತಮ್ಮ ಅಳಲು ತೋಡಿಕೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಕಡೆ ಸ್ಪರ್ಧೆ ಮಾಡುವ ಒತ್ತಡ ಸೃಷ್ಟಿಯಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ 2 ಗಂಟೆ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. 2 ಕಡೆ ಸ್ಪರ್ಧೆಗೆ ಒಲ್ಲೆ ಎಂದೆ. ಇದಾದ ನಂತರ ಪ್ರಧಾನಿ ಮೋದಿ ಕೂಡ ದೆಹಲಿಗೆ ಕರೆಸಿಕೊಂಡಿದ್ದರು. ನಾಲ್ಕು ದಿವಸ ಅಲ್ಲಿಯೇ ಇರಿಸಿಕೊಂಡು ‘ನೀನು ಎರಡೂ ಕಡೆ ನಿಂತ್ಕೋ’ ಎಂದರು, ಏನ್ಮಾಡ್ಲಿ? ಎಂದ ಸೋಮಣ್ಣ ಕ್ಯಾಮರಾ ಕಂಡೊಡನೆ ಮಾತು ಬದಲಿಸಿದರು. ಗೋವಿಂದರಾಜನಗರ ಬಿಟ್ಟು ಬೇರೆ ಎರಡು ಕಡೆ ಹೋಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧವಾಯ್ತು ಎಂದೂ ಅವರು ಶ್ರೀಗಳೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
