ಕಡ್ಡಾಯವಾಗಿ ಬಳಸಿ
ಪ್ರತಿನಿಧಿ ವರದಿ ಮೈಸೂರು
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ನಗರದ ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ(ಎಂಐಟಿ)ಯಲ್ಲಿ ನಡೆದ ಪದವಿ ಕಾಲೇಜಿನ ದ್ವಿತೀಯ ವಾರ್ಷಿಕೋತ್ಸವ “ಮಿತ್ರೋತ್ಸವ” ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಇಂದು ವಿದ್ಯಾರ್ಥಿಗಳ ನಡುವೆ ಸಾಕಷ್ಟು ಪೈಪೋಟಿ ಉಂಟಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಶೈಕ್ಷಣಿಕ ಪ್ರಗತಿ ಸಾಧಿಸಲು ಹಾಗೂ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ವಿಶ್ರಾಂತ ಕುಲಪತಿ ಪ್ರೊ. ಹೇಮಂತ್ ಕುಮಾರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೊಸತನಕ್ಕೆ ಹೆಚ್ಚು ಆದ್ಯತೆ ಇದ್ದು, ಸಂಶೋಧನೆಯ ಮೌಲ್ಯ ಎಂದಿಗೂ ಕುಗ್ಗುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಹಾಗೂ ಶೈಕ್ಷಣಿಕವಾಗಿ ಉನ್ನತ ಶ್ರೇಣಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಎಂಇಟಿ ಅಧ್ಯಕ್ಷ ಡಾ.ಎಸ್. ಮುರಳಿ, ಎಂಇಟಿಯ ಕಾರ್ಯದರ್ಶಿ ಡಾ.ಟಿ.ವಾಸುದೇವ್, ಎಂಐಟಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಮಂಜು, ಡಾ.ಚಂದ್ರಜಿತ್, ಆಡಳಿತಾಧಿಕಾರಿ ಎ.ಎಂ. ಅನಿರುದ್ಧ ಇದ್ದರು.
=================

