ರಿಷಬ್ ಶೆಟ್ಟಿ ಅವರು ಆಶಿಸಿದಂತೆ ಎಲ್ಲವೂ ನಡೆಯುತ್ತಿದೆ. ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಇದೇ ಖುಷಿಯಲ್ಲಿ ಈಗ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾಗೆ ಚಾಲನೆ ನೀಡಿದ್ದಾರೆ. ಇದರ ಜೊತೆಗೆ ಗೋವಾದಲ್ಲಿ ನಡೆದ 54ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಅವರಿಗೆ ವಿಶೇಷ ಜ್ಯೂರಿ ಅವಾರ್ಡ್ ಸಿಕ್ಕಿದೆ. ಇದು ರಿಷಬ್ ಅವರ ಖುಷಿಯನ್ನು ಹೆಚ್ಚಿಸಿದೆ. ಅವರು ಅಭಿಮಾನಿಗಳಿಗೆ ವಿಶೇಷ ಪತ್ರ ಒಂದನ್ನು ಬರೆದಿದ್ದು, ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.
‘54ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿದೆ. ಇದು ಎಂದೂ ಮರೆಯಲಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ. ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಅವರಿಗೆ 1979ರಲ್ಲಿ ‘ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿತ್ತು. ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತಸ ನೀಡಿದೆ’ ಎಂದು ಪತ್ರ ಆರಂಭಿಸಿದ್ದಾರೆ ರಿಷಬ್ ಶೆಟ್ಟಿ.
‘ಕಾಂತಾರವನ್ನು ನೋಡಿ ಕನ್ನಡಿಗರು ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಇದೀಗ ಕಾಂತಾರ ಒಂದನೇ ಅಧ್ಯಾಯಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮವಾದ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಆಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ’ ಎಂದಿದ್ದಾರೆ ರಿಷಬ್ ಶೆಟ್ಟಿ.
ರಿಷಬ್ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಪೂಜೆ ನಡೆದಿದೆ. ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ ಪಾತ್ರವರ್ಗ ಇನ್ನೂ ಫೈನಲ್ ಆಗಿಲ್ಲ. ‘ಕಾಂತಾರ’ ಸಿನಿಮಾದ ಪ್ರಿಕ್ವೆಲ್ ಇದಾಗಿದೆ.

