ಮಂಡ್ಯ: ಲೋಕಸಭೆ ಚುನಾವಣೆಗೆ ಎಐಸಿಸಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ. ಕರ್ನಾಟಕ, ತೆಲಂಗಾಣ ಮಾತ್ರವಲ್ಲ ದೇಶದಲ್ಲಿ ರೈತರು ಕಷ್ಟದಲ್ಲಿ ಇದ್ದಾರೆ. ರೈತರು ಯಾರ ಮುಂದೆ ಹಸ್ತ ಚಾಚುವುದಿಲ್ಲ.ಅವರಿಗೆ ನ್ಯಾಯ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಂಡ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ಮೂಲಕ 4000 ಕಿ.ಮೀ. ಪಾದಯಾತ್ರೆ ಮಾಡಿದ್ದೇನೆ. ದೇಶದ ತುಂಬೆಲ್ಲ ರೈತರು 2-3 ಮನವಿ ಮಾಡಿದ್ದಾರೆ. ಬೇರೆ ವಸ್ತುಗಳಿಗೆ ಸರಿಯಾದ ಬೆಲೆ ಸಿಗುತ್ತೆ. ಆದ್ರೆ ಭತ್ತ, ಕಬ್ಬು ಸೇರಿದಂತೆ ಬೆಳೆಗಳಿಗೆ ಸರಿಯಾಗಿ ಬೆಳೆ ಸಿಗುತ್ತಿಲ್ಲ. ರಾಷ್ಟ್ರ ವ್ಯಾಪ್ತಿಯಲ್ಲಿ 16 ಲಕ್ಷ ಕೋಟಿ ರೂ. ಶ್ರೀಮಂತರ ಸಾಲ ಮನ್ನಾ ಆಗುತ್ತೆ. ರೈತರ ಸಾಲ ಯಾಕೆ ಮನ್ನಾ ಆಗುವುದಿಲ್ಲ? ಪ್ರಧಾನಿ ಮಂತ್ರಿ ವಿಮಾ ಯೋಜನೆಯಲ್ಲಿ ರೈತರು ಹಣ ಕಟ್ಟಿದರೂ ಕಂಪನಿ ಯಾಕೆ ನಮಗೆ ಪ್ರವಾಹ, ಬರಕ್ಕೆ ಪರಿಹಾರ ಕೊಡಲ್ಲ. ನಾವು ಅಧಿಕಾರಕ್ಕೆ ಬಂದ್ರೆ ನ್ಯಾಯ ಬದ್ಧವಾದ ಎಂಎಸ್‌ಪಿ ಜಾರಿ ಮಾಡುತ್ತೇವೆ. ನರೇಂದ್ರ ಮೋದಿ ತಮ್ಮ ಆಪ್ತರ ಸಾಲ ಮನ್ನಾ ಮಾಡಿದ್ರು. ಅದೇ ರೀತಿ ನಾವು ವಿಮಾ ಯೋಜನೆ ಹಣ ಕೊಡಿಸುತ್ತೇವೆ. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ 24 ಸಾವಿರ ರೂ. ಕೊಡುತ್ತಿದೆ. ಪುರುಷರು 8 ಗಂಟೆ ಕೆಲಸ ಮಾಡಿದ್ರೆ ಮಹಿಳೆಯರು 16 ಗಂಟೆ ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ವರ್ಷಕ್ಕೆ 1 ಲಕ್ಷ ರೂ. ಕೊಡ್ತೀವಿ ಎಂದು ಭರವಸೆ ನೀಡಿದ್ದಾರೆ.
