ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಸಾಕಷ್ಟು ಬೆಳೆಗಳು ಒಣಗಿ ಹೋಗಿವೆ. ಇದರ ನಡುವೆಯೂ ರೈತರು ಶ್ರಮಪಟ್ಟು ಕೆಲ ಬೆಲೆಗಳನ್ನು ಬೆಳೆದಿದ್ದಾರೆ. ಇವುಗಳ ಪೈಕಿ ಅಲ್ಪ ಪ್ರಮಾಣದಲ್ಲಿ ಬೆಳೆದಿರುವ ಮುಸುಕಿನ ಜೋಳವನ್ನು ಕೆಎಂಎಫ್‌ನಿಂದ ನೇರವಾಗಿ ಖರೀದಿಸಬೇಕು ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಗಣಪತಿ ಪೆಂಡಾಲಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ , ಈಗಾಗಲೇ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ನೀರಾವರಿ ಮತ್ತು ಪಂಪ್‌ಸೆಟ್ ಮೂಲಕ ಹಾಗೂ ಬಿದ್ದಂತಹ ಅಲ್ಪಸ್ವಲ್ಪ ಮಳೆಯಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದಾರೆ. ಅದನ್ನ ಮುಖ್ಯಮಂತ್ರಿಗಳು ತಕ್ಷಣವೇ ಕೆಎಂಎಫ್ ಮೂಲಕ ಹೆಚ್ಚುವರಿ ಹಣ ಕೊಟ್ಟು ಖರೀದಿ ಮಾಡಬೇಕು. ಇಲ್ಲವಾದರೆ ಮುಂದಿನ ಸೋಮವಾರ ಕೆಎಂಎಫ್ ಕಟ್ಟಡಕ್ಕೆ ಜೋಳ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೆಎಂಎಫ್ ಅಧಿಕಾರಿಗಳು ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಮೂಲಕ ಖರೀದಿ ಮಾಡುತ್ತಿದ್ದಾರೆ. ಇದರ ಬದಲಾಗಿ ರೈತರಿಂದಲೇ ನೇರವಾಗಿ ಖರೀದಿಗೆ ಮುಖ್ಯಮಂತ್ರಿಗಳು ಆದೇಶ ನೀಡುವ ಮೂಲಕ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.