ಮತಗಟ್ಟೆಗಳ ಸುತ್ತಲಿನ 100 ಮೀ. ಅಂತರದೊಳಗೆ ನಿಷೇಧಾಜ್ಞೆ
ಪ್ರತಿನಿಧಿ ವರದಿ ಚಾಮರಾಜನಗರ : ಲೋಕಸಭಾ ಚುನಾವಣೆಯು ಏ.26ರಂದು ನಡೆಯಲಿರುವುದರಿಂದ ಮತದಾನ ಕೇಂದ್ರದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏ.25ರ ಮಧ್ಯರಾತ್ರಿ 12 ಗಂಟೆಯಿಂದ ಏ.26ರ ಮಧ್ಯರಾತ್ರಿ 12 ಗಂಟೆಯವರೆಗೆ ಚಾಮರಾಜನಗರ ಜಿಲ್ಲೆಯ ಒಟ್ಟು 983 ಮತಗಟ್ಟೆಗಳ ಸುತ್ತಲಿನ 100 ಮೀ ಅಂತರದೊಳಗೆ ಕೆಲ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶಿಲ್ಪಾ ನಾಗ್ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಮೆರವಣಿಗೆ ಅಥವಾ 5 ಜನರಿಗಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳನ್ನು ಒಯ್ಯುವಂತಿಲ್ಲ. ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು ಮತ್ತು ಬಹಿರಂಗ ಘೋಷಣೆ ಇತ್ಯಾದಿಗಳನ್ನು ನಿರ್ಬಂಧಿಸಿದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಡುವುದು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ, ಸಾರ್ವಜನಿಕರ ಗಾಂಭೀರ್ಯ, ನೈತಿಕತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಈ ಆದೇಶವು ಚುನಾವಣಾ ಕರ್ತವ್ಯ ನಿರತ ಮತಗಟ್ಟೆ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಅಧಿಕಾರಿ, ನೇಮಕಗೊಂಡಿರುವ ಚುನಾವಣಾ ಏಜೆಂಟರು ಮತ್ತು ಒಬ್ಬೊಬ್ಬರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ. ಅಂತ್ಯಕ್ರಿಯೆ ಮೆರವಣಿಗೆ ಹಾಗೂ ಇನ್ನಿತರ ಪ್ರಾಧಿಕಾರದಿಂದ ಅನುಮತಿ ಪಡೆದ ಪ್ರಕರಣಗಳಿಗೆ ಆದೇಶವು ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶಿಲ್ಪಾ ನಾಗ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
