ಪ್ರಧಾನಿ ನರೇಂದ್ರ ಮೋದಿ ಇಂದು(ಶನಿವಾರ) ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಳಗ್ಗೆ 9:15ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಮೋದಿ ಅವರು ಎಚ್‌ಎಎಲ್ (ಹಿಂದುಸ್ತಾನ್ ಏರೋನಾಟಿಕಕ್ಸ್ ಲಿಮಿಟೆಡ್ )ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೋದಿ, ಲಘು ಯುದ್ಧ ವಿಮಾನ ತೇಜಸ್ ಉತ್ಪಾದನೆ ಸೇರಿದಂತೆ ಎಚ್‌ಎಎಲ್‌ನ ಉತ್ಪಾದನಾ ಘಟಕದ ಸೌಲಭ್ಯ ಹಾಗೂ ಇತರ ಕೆಲಸಗಳನ್ನು ಪರಿಶೀಲನೆ ನಡೆಸಲಿದ್ದಾರೆ.
ರಕ್ಷಣಾ ವಸ್ತುಗಳನ್ನು ಸ್ವದೇಶದಲ್ಲೇ ಉತ್ಪಾದಿಸುವ ಗುರಿಯೊಂದಿಗೆ ತೇಜಸ್ ಉತ್ಪಾದನೆಗೆ ನಾಂದಿ ಹಾಡಲಾಗಿತ್ತು. ಈಗಾಗಲೇ ತೇಜಸ್ ಅನ್ನು ಖರೀದಿಸಲು ಹಲವಾರು ದೇಶಗಳು ಆಸಕ್ತಿ ತೋರಿಸಿದ್ದು, ಅಮೆರಿಕದ ರಕ್ಷಣಾ ದೈತ್ಯ ಜಿಇ ಏರೋಸ್ಪೇಸ್ ಎಂಕೆ-11- ತೇಜಸ್‌ಗೆ ಜಂಟಿಯಾಗಿ ಎಂಜಿನ್‌ಗಳನ್ನು ಉತ್ಪಾದಿಸಲು ಎಚ್‌ಎಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ 15,920 ಕೋಟಿ ರು. ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಿದ ಹಿನ್ನಲೆಯಲ್ಲಿ ಎಚ್ಎಎಲ್ ಸುತ್ತಮುತ್ತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಲಿಸಲಾಗಿದೆ. ಭದ್ರತೆಗೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ವೈಟ್ ಫೀಲ್ಡ್ ಡಿಸಿಪಿ ನೇತೃತ್ವದಲ್ಲಿ ಪೊಲೀಸರ ಬಂದೋಬಸ್ತ್ ಕಲ್ಪಿಸಲಾಗಿದೆ. 4 ಎಸಿಪಿ, 8 ಇನ್ಸ್ಪೆಕ್ಟರ್ ಸೇರಿ 500 ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.
