ಚಿಕ್ಕಬಳ್ಳಾಪುರ: ಮಳೆಗಾಗಿ ಪ್ರಾರ್ಥಿಸಿ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡತಮ್ಮನಹಳ್ಳಿ ಗ್ರಾಮದಲ್ಲಿ ರಾಮಕೋಟಿ ಭಜನಾ ಸಮಿತಿ ವತಿಯಿಂದ ಸತತ ೭೨ ಗಂಟೆ ಕಾಲ ರಾಮಕೋಟಿ ಭಜನೆ ಹಮ್ಮಿಕೊಳ್ಳಲಾಗಿದೆ.
ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ, ಶ್ರೀಲಕ್ಷ್ಮಿನರಸಿಂಹಸ್ವಾಮಿ, ನವಗ್ರಹಗಳ ದೇವಾಲಯ ಸಂಕೀರ್ಣದಲ್ಲಿ ೧೨.೩೦ ಗಂಟೆಗೆ ಆರಂಭಗೊಂಡಿರುವ ರಾಮಕೋಟಿ ಭಜನೆ ಸತತ ೭೨ ಗಂಟೆಗಳ ಕಾಲ ನಡೆಯಲಿದೆ. ಭಜನಾವಳಿಯಲ್ಲಿ ಸುತ್ತಲಿನ ನೂರಾರು ರಾಮಭಕ್ತರು ಭಾಗವಹಿಸಿದ್ದಾರೆ.
ಈ ಕುರಿತು ರಾಮಕೋಟಿ ಭಜನಾ ಸಮಿತಿಯ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ ಮಾತನಾಡಿ, ಬಯಲು ಸೀಮೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಿಯಾಗಿ ಮಳೆ ಬಾರದೇ ರೈತರು ಕಂಗಲಾಗಿದ್ದಾರೆ. ಉತ್ತಮ ಮಳೆ, ಬೆಳೆ ವೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ಭಕ್ತರ ಸಮ್ಮುಖದಲ್ಲಿ ರಾಮಕೋಟಿ ಭಜನೆ ನಡೆಸಲಾಗುತ್ತಿದೆ ಎಂದರು.
ರಾಮಕೋಟಿ ಭಜನಾ ಸಮಿತಿಯ ಉಪಾಧ್ಯಕ್ಷ ಅಂಕಣಗೊಂದಿ ರಂಗಪ್ಪ, ನಾಗಭೂಷಣ್, ಗೋಪಾಲಚಾರಿ, ಶಾಂತಮೂರ್ತಿ, ರಾಮದಾಸ್ ಇದ್ದರು.

