ಮೈಸೂರು: ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ, ವಿಡಿಯೋ ಹಂಚಿಕೆ ಸಂಬಂಧ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸುತ್ತಿರುವ ಜೆಡಿಎಸ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಈ ಪ್ರಕರಣವನ್ನ ಅಶೋಕ್ ಸೇರಿದಂತೆ ಹಲವರು ಡಿಕೆ ಶಿವಕುಮಾರ್ ಮೇಲೆ ಹೊರಿಸುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಆರ್ ಅಶೋಕ್, ವಿಜಯೇಂದ್ರ, ಪ್ರೀತಮ್ ಗೌಡ, ದೇವರಾಜೇಗೌಡ ನಾಲ್ವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸತ್ಯ ಹೊರಬರುತ್ತದೆ ಎಂದಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಎಂ.ಲಕ್ಷ್ಮಣ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿದೆ. ಈ ಪ್ರಕರಣವನ್ನ ಅಶೋಕ್ ಸೇರಿದಂತೆ ಹಲವರು ಡಿ.ಕೆ ಶಿವಕುಮಾರ್ ಮೇಲೆ ಹೊರಿಸುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ನಾಯಕರ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲಿಕ್ಕೆ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಸುಮ್ಮನಿದ್ದ ಬಿಜೆಪಿಯವರು ದೇವರಾಜೇಗೌಡ ಹೇಳಿಕೆ ಬಳಿಕ ಅಲರ್ಟ್ ಆಗಿದ್ದಾರೆ. ಮೊದಲು ದೇವರಾಜೇಗೌಡನನ್ನ ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ವಿಡಿಯೋ ಮಾಡಿದ್ದು ಪ್ರಜ್ವಲ್ ರೇವಣ್ಣ. ವಿಡಿಯೋ ತೆಗೆದುಕೊಂಡಿದ್ದು ಕಾರ್ತಿಕ್, ದೇವರಾಜೇಗೌಡ ಮೂಲಕ ವಿಡಿಯೋ ರಿಲೀಸ್ ಆಗಿದೆ. ಇದರ ನಡುವೆ ಡಿಕೆ ಶಿವಕುಮಾರ್ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
