- ಒಕ್ಕಲಿಗರ ಸಂಘದ ಮುಖಂಡ ಬಿ.ಪಿ. ಮಂಜೇಗೌಡ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಕಾಂಗ್ರೆಸ್ ಮುಖಂಡರ ಮೇಲೆ ಗೂಬೆ ಕೂರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಹಾಗೂ ಹಾಸನದ ಕಾಂಗ್ರೆಸ್ ಮುಖಂಡ ಬಿ. ಪಿ. ಮಂಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜೇಗೌಡರೇ ಪೆನ್ ಡ್ರೈವ್ ಹಂಚಿಕೆಯ ಜನಕ. ಅವರೇ ಇಂತಹ ಷಡ್ಯಂತ್ರ ರೂಪಿಸಿದ್ದು, ಅವರೇ ಹಂಚಿಕೆ ಮಾಡಿದ್ದಾರೆ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತು ಎಂಬ ಗಾದೆ ಮಾತು ದೇವರಾಜೇಗೌಡರಿಗೆ ಅನ್ವಯಿಸುತ್ತದೆ. ಮೊದಲು ಪೆನ್ ಡ್ರೈವ್ ಸಿಕ್ಕಿದ್ದು, ಅದನ್ನು ನೋಡಿದ್ದು ಎಲ್ಲದರಲ್ಲೂ ಅವರೇ ಮೊದಲಿಗರು. ಬಿಜೆಪಿ ದೆಹಲಿ ನಾಯಕರು, ರಾಜ್ಯ ಬಿಜೆಪಿ ನಾಯಕರಿಗೆ ಪೆನ್ ಡ್ರೈವ್ ಗಳಿಗೆ ಕಾಪಿ ಮಾಡಿಕೊಂಡು ಸಲ್ಲಿಸಿದ್ದಾರೆ ಎಂದರು.
ಸ್ವತಃ ಬಿಜೆಪಿ ಮುಖಂಡ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಹಾಸನ ಕ್ಷೇತ್ರದಿಂದ ಪ್ರಜ್ವಲ್ ಅವರನ್ನು ಕಣಕ್ಕಿಳಿಸುವುದು ಬೇಡ. ಬೇರೆ ಯಾರಿಗಾದರೂ ಟಿಕೆಟ್ ನೀಡುವಂತೆ ಹೇಳಿದ್ದರು. ಇದನ್ನು ಹಾಸನದ ಬಿಜೆಪಿ ನಾಯಕರು ಜಿಲ್ಲೆಯಾದ್ಯಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಕುಮಾರಸ್ವಾಮಿ ಅವರು ಸಹ ಇದನ್ನು ಸೂಚ್ಯವಾಗಿ ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಪೆನ್ ಡ್ರೈವ್ ಹಂಚಿದ್ದೆಂದು ಅವರ ಮೇಲೆ ಅನಗತ್ಯವಾಗಿ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಡಿ.ಕೆ. ಶಿವಕುಮಾರ್ ಅವರು ಕರ್ನಾಟಕವಷ್ಟೇ ಅಲ್ಲದೇ ಹಲವು ರಾಜ್ಯಗಳಲ್ಲಿ ಪಕ್ಷದ ಜವಾಬ್ದಾರಿ ನಿಭಾಯಿಸುತ್ತಿದ್ದು, ಎಡೆಬಿಡದೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂತಹ ನಾಯಕರ ಮೇಲೆ ವೃಥಾ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ದೇವರಾಜೇಗೌಡರು ಕಟ್ಟುಕಥೆ ಕಟ್ಟಿದ್ದಾರೆ. 2019 ರಿಂದ ಅವರು ನ್ಯಾಯಾಲಯದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಶ್ಲೀಲ ಪೆನ್ ಡ್ರೈನ್ ಅನ್ನು ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ನೀಡಿದ್ದಾರೆ. ದೇವರಾಜೇಗೌಡರು ಈ ಅಶ್ಲೀಲ ಪೆನ್ ಡ್ರೈವ್ ಅನ್ನು ಹಾಸನದ ಸರ್ಕಲ್ ನಲ್ಲಿ ಎಲ್.ಇ.ಡಿ ಟಿವಿ ಪರದೆ ಮೇಲೆ ತೋರಿಸುವುದಾಗಿ ಹೇಳಿದ್ದು ಯಾರು ಎಂದು ಬಿ.ಪಿ. ಮಂಜೇಗೌಡ ಖಾರವಾಗಿ ಪ್ರಶ್ನಿಸಿದರು.
ತಮಗೆ ಕಾಂಗ್ರೆಸ್ ಮುಖಂಡರು ರಾಜಕೀಯ ಅಧಿಕಾರ ಮತ್ತಿತರ ಆಮೀಷ ಒಡ್ಡಿದ್ದರು ಎಂಬುದು ಸಹ ಶುದ್ದ ಸುಳ್ಳು. ಬಿಜೆಪಿ ನಾಯಕರಿಂದ ಇವರು ಡೀಲ್ ಪಡೆದುಕೊಂಡಿದ್ದಾರೆ. ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಪೆನ್ ಡ್ರೈವ್ ಅನ್ನು ದೇವರಾಜೇಗೌಡರು ನನಗೂ ನೀಡಲು ಬಂದಿದ್ದರು. ಆದರೆ ಅಶ್ಲೀಲ ದೃಶ್ಯ ನೋಡುವುದಿಲ್ಲ ಎಂದು ಹೇಳಿ ಪೆನ್ ಡ್ರೈನ್ ಸ್ವೀಕರಿಸಲಿಲ್ಲ. ಹಾಗಿದ್ದರೆ ಇವರು ಎಷ್ಟು ಪೆನ್ ಡ್ರೈವ್ ಗಳನ್ನು ಕಾಪಿ ಮಾಡಿಕೊಂಡಿದ್ದಾರೆ? ಯಾರು ಯಾರಿಗೆ ಹಂಚಿದ್ದಾರೆ. ಇವೆಲ್ಲಾ ಬಹಿರಂಗವಾಗಬೇಕು. ಎಸ್.ಐ.ಟಿ ಅಧಿಕಾರಿಗಳು ದೇವರಾಜೇಗೌಡರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯ ಸಂಗತಿ ಬೆಳಕಿಗೆ ಬರಲಿದೆ ಎಂದು ಬಿ. ಪಿ. ಮಂಜೇಗೌಡ ಒತ್ತಾಯಿಸಿದರು.
###
