ಮೈಸೂರು: 3 ಲಕ್ಷ ರೂ. ಮೌಲ್ಯದ 2 ಹಸು, 2 ಎತ್ತುಗಳು ವಿಷಪೂರಿತ ಆಹಾರ ಸೇವಿಸಿ ನಾಲ್ಕು ಮಿಶ್ರ ತಳಿ ಹಸುಗಳು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ಕೃಷ್ಣಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಕೃಷ್ಣ ಎಂಬುವರಿಗೆ ಸೇರಿದ ಹಸುಗಳಾಗಿದ್ದು, ಎರಡು ಎತ್ತುಗಳು, ಎರಡು ಹಸುಗಳು. ಇದರಲ್ಲಿ ಒಂದು ಗಬ್ಬದ ಹಸುವನ್ನು ಸಾಕಿದ್ದರು. ನಿನ್ನೆ ಬೆಳಗ್ಗೆ 6 ಗಂಟೆಗೆ ಹಾಲು ಕರೆಯುವ ಹಸುವಿಗೆ ಫೀಡ್ ನೀಡಿದ್ದಾರೆ. ಯಾಚೇಗೌಡನಹಳ್ಳಿ ಗ್ರಾಮದ ಶ್ರೀ ಗಣೇಶ ಫೀಡ್ಸ್ನಿಂದ ಖರೀದಿಸಿದ್ದ ಫೀಡ್ಸ್ ಇದಾಗಿದ್ದು, ಫೀಡ್ಸ್ ತಿಂದ ಕೆಲವೇ ಸಮಯದಲ್ಲಿ ಹಸು ಒದ್ದಾಡಿ ಮೃತಪಟ್ಟಿದೆ. ನಂತರ ಮನೆಯವರು ಗುಂಡಿ ತೆಗೆದು ಹಸುವನ್ನು ಹೂತಿದ್ದರು. ಬಳಿಕ ಸತ್ತ ಹಸುವಿಗೆ ಇಟ್ಟಿದ್ದ ಫೀಡ್ಸ್ ಬಕೆಟ್ನ್ನೇ ಉಳಿದ ಹಸುಗಳಿಗೂ ಇಟ್ಟಿದ್ದಾರೆ. ಅದನ್ನು ಸೇವಿಸಿದ ಉಳಿದ ಹಸುಗಳೂ ಮೃತಪಟ್ಟಿವೆ. ವಿಷಯ ತಿಳಿಯುತ್ತಿದ್ದಂತೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಾದ ಡಾ. ರಾಜಶೇಖರಪ್ಪ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ಮಾಡಿದಾಗ ಹಸುಗಳು ತಿಂದಿರುವ ಫೀಡ್ಸ್ ವಿಷವಾಗಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ. ಈ ನಾಲ್ಕು ಹಸುಗಳ ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಹಸುಗಳ ಮಾಲೀಕ ಜಯಕೃಷ್ಣ ತಿಳಿಸಿದ್ದಾರೆ.
