ಹಾಸನ : ಹಾಸನದಲ್ಲಿ ಮೈತ್ರಿಗೆ ಬಂಡಾಯದ ಬಿಸಿ ತಟ್ಟ ತೊಡಗಿದೆ. ಒಂದೆಡೆ, ಮೈತ್ರಿ ಅಭ್ಯರ್ಥಿಯೆಂದು ಜೆಡಿಎಸ್ ಪಕ್ಷದ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಪ್ರಚಾರ ನಡೆಸುತ್ತಿದೆ. ಮೈತ್ರಿ ಅಭ್ಯರ್ಥಿ ಅಂತಿಮವಾಗಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡರ ಅತ್ಯಾಪ್ತ ಎಚ್.ಪಿ ಕಿರಣ್ ಕುಮಾರ್ ಸಹ ಪ್ರಚಾರ ಆರಂಭಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಜಗಳ ಬೀದಿಗೆ ಬಂದಂತಾಗಿದೆ. ಜೆಡಿಎಸ್ ನಾಯಕರಿಗೆ ತಿರುಗೇಟು ಕೊಡಲು ಸಜ್ಜಾದ ಪ್ರೀತಂಗೌಡ ಟೀಂ, ಜೆಡಿಎಸ್ ಅಭ್ಯರ್ಥಿಗೆ ಪರ್ಯಾಯವಾಗಿ ಬಿಜೆಪಿ ಟಿಕೇಟ್ ಆಕಾಂಕ್ಷಿಯನ್ನು ಅಖಾಡಕ್ಕಿಳಿಸಿದೆ. ಅಧಿಕೃತವಾಗಿ ಜಿಲ್ಲಾಮಟ್ಟದಲ್ಲಿ ಮೈತ್ರಿ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಪ್ರಚಾರ ಆರಂಭಿಸಲಾಗಿದೆ. ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿ ಕಿರಣ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ.

