ಜು.6 ಸಭೆಗೆ ಬರಲು ಒಪ್ಪದ ಸದಸ್ಯರು * ಆಸ್ತಿ ಸಂರಕ್ಷಣಾ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಆರೋಪ
ಪ್ರತಿನಿಧಿ ವರದಿ ಚಾಮರಾಜನಗರ
ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಪರಭಾರೆ ಪ್ರಕರಣ ಸಂಬಂಧ ಸಿ.ಕೆ.ಮಂಜುನಾಥ್ ಅವರು ಜು.6ರಂದು ಆಯೋಜಿಸಿರುವ ಸೌಹಾರ್ಧ ಸಭೆಯಲ್ಲಿ ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಯಾವುದೇ ಕಾರಣಕ್ಕೂ ಭಾಗವಹಿಸುವುದಿಲ್ಲ ಎಂದು ಸಮಿತಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ತಿಳಿಸಿದರು.
ಚಾ.ನಗರ ತಾಲೂಕು ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟ ಮತ್ತು ಜಿಲ್ಲಾ ಅಂಬೇಡ್ಕರ್ ಸೇನೆ, ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜು.6ರಂದು ನಗರದ ಅಂಬೇಡ್ಕರ್ ಭವನದಲ್ಲಿ 10 ಗಂಟೆಗೆ ಸೌಹಾರ್ಧ ಸಭೆ ಕರೆಯಲಾಗಿದೆ. ಆದರೆ ಈ ಸಭೆ ಆದಿ ಕರ್ನಾಟಕ ಅಭಿವೃದ್ದಿ ಸಂಘದ ಪದಾಧಿಕಾರಿಗಳು, ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯರ ನಡುವೆ ಗೊಂದಲ ಹಾಗೂ ಗಲಭೆಗೆ ಕಾರಣವಾಗಲಿದೆ. ಹೀಗಾಗಿ ಆದಿ ಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಸೌಹಾರ್ಧ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಭಯ ಬಣಗಳ ಸೌಹಾರ್ಧ ಸಭೆಯು ಅನಧಿಕೃತವಾಗಿದ್ದು, ಈ ಸಭೆಯನ್ನು ಆಯೋಜಿಸಿರುವವರು ಆದಿ ಕರ್ನಾಟಕ ಅಭಿವೃದ್ದಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿಯ ಹಿಂಬಾಲಕರಾಗಿದ್ದಾರೆ. ಸೌಹಾರ್ಧದ ಹೆಸರಲ್ಲಿ ಸಭೆಯಲ್ಲಿ ಗೊಂದಲ ಹಾಗೂ ಗಲಭೆ ಸೃಷ್ಟಿಸಿ ಪ್ರಕರಣ ದಾಖಲಿಸುವ ಯೋಜನೆ ಮಾಡಿದ್ದಾರೆ. ಸಭೆಯಲ್ಲಿ ಸಮುದಾಯದ ಸ್ವಾಮೀಜಿಗಳು, ಶಾಸಕರು, ಸಂಘಟನೆಗಳ ಮುಖಂಡರು ಯಾರು ಭಾಗವಹಿಸುದಿಲ್ಲ. ಆದ್ದರಿಂದ ಸಮುದಾಯದವರು ಭಾಗವಹಿಸಬಾರದು ಎಂದು ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವು, ಮಾಜಿ ಸದಸ್ಯ ನಲ್ಲೂರು ಸೋಮೇಶ್ವರ್, ಮುಖಂಡರಾದ ಚನ್ನಂಜಯ್ಯ, ಗೋವಿಂದರಾಜು, ನಾಗಯ್ಯ, ಸೋಮಣ್ಣ, ರಂಗಸ್ವಾಮಿ ಇದ್ದರು.

