ಪ್ರತಿನಿಧಿ ವರದಿ ಕೋಲಾರ
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಪಕ್ಷವೇ ದೇಶದ ಆಡಳಿತ ನಡೆಸುತ್ತಿತ್ತು. ಈ ಮಧ್ಯೆ ಕೆಲವೊಂದು ಪಕ್ಷಗಳು ಬಂದು ಹೋಗಿದ್ದರೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು ಎಂದು ಮಾಜಿ ಸಚಿವ ಹಾಗೂ ಇಪ್ಕೋ ನಿರ್ದೇಶಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಇಪ್ಕೋ ಸಂಸ್ಥೆಯಿಂದ ಕಿಡ್ನಿ, ಹೃದಯ, ಕ್ಯಾನ್ಸರ್, ಮಧುಮೇಹ, ಅಪಘಾತದ ಶಸ್ತ್ರಚಿಕಿತ್ಸೆ, ಇತ್ಯಾದಿ ಅನಾರೋಗ್ಯಕ್ಕೆ ಒಳಗಾದ ೯ ಮಂದಿಗೆ ೧.೮೫ ಲಕ್ಷ ರೂ. ನೆರವಿನ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ಪ್ರಸ್ತುತ ಬಿಜೆಪಿ ಪಕ್ಷವು ಸತತವಾಗಿ ಮೂರನೇ ಭಾರಿಗೆ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವುದು ಸ್ವಾಗತಾರ್ಹವಾದರೂ ಆಡಳಿತದಲ್ಲಿ ಎಲ್ಲ ಧರ್ಮದವರನ್ನು ಸಮಾನತೆಯಿಂದ ಪರಿಗಣಸಬೇಕೆಂದು ಸಲಹೆ ನೀಡಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನನ್ನ ಸೋಲಿಗೆ ಒಕ್ಕಲಿಗರು ಕಾರಣ ಎಂದು ಆರೋಪಿಸಿದರು. ಸಮುದಾಯದವರನ್ನು ಚುನಾವಣಾ ಪ್ರಚಾರದಲ್ಲಿ ನಿಂದಿಸಿದ್ದು ವಿಷಾದನೀಯ ಸಂಗತಿಯಾಗಿದೆ. ಇದಕ್ಕೂ ಮುನ್ನ ಸತತವಾಗಿ ಎರಡು ಭಾರಿ ಗೆಲುವು ತಂದುಕೊಟ್ಟಿದ್ದನ್ನು ಮರೆತು, ತಾಳ್ಮೆ ಕಳೆದುಕೊಂಡು ಹತಾಶೆಯ ನುಡಿಗಳಾಡಿ ನಿಂದಿಸಿದ್ದು ಸಮುದಾಯದವರಿಗೆ ನೋವಿನ ಸಂಗತಿಯಾಗಿದೆ ಎಂದು ವಿಷಾದಿಸಿದ ಅವರು, ರಮೇಶ್‌ಕುಮಾರ್ ಸೋಲಿಗೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದಯಾನಂದ್, ಹೋಟೆಲ್ ರಾಮಣ್ಣ, ರಮೇಶ್ ಮುಂತಾದವರು ಇದ್ದರು.
