ಮೈಸೂರು: ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗೋಷ್ಠಿ ಮಾಡಿದ್ದು, ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್, ಕೋಟೆ ಶಿವಣ್ಣ, ನಿರಂಜನ್ ಕುಮಾರ್, ಹರ್ಷವರ್ಧನ್, ಬಾಲರಾಜ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿಗೆ ಕರ್ನಾಟಕ ಸುಭದ್ರ ಕೋಟೆಯಾಗಿ ರೂಪಿಸಬೇಕು ಎಂಬುದು ನಮ್ಮ ಉದ್ದೇಶ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಬೇಕು. ಜಿಲ್ಲಾ ಪಂಚಾಯಿತಿ ಕಾರ್ಯಕರ್ತರ ಚುನಾವಣೆ. ಅದರಲ್ಲೂ ಬಿಜೆಪಿ ಗೆಲ್ಲಿಸಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು. ಮೈಸೂರಿನೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ. ರಾಷ್ಟ್ರೀಯ ನಾಯಕರು ಗುರುತಿಸಲು, ಶಿಕಾರಿಪುರದವರು ಶಾಸಕನಾಗಿ ಮಾಡಲು ಮೈಸೂರು-ಚಾಮರಾಜನಗರ ಕಾರಣ. ಹಳೇ ಮೈಸೂರು ಭಾಗ ನನ್ನ ಪ್ರಥಮ ಆದ್ಯತೆ. ಮುಂದಿನ ಚುನಾವಣೆಗಳಲ್ಲಿ ಈ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
