ಗ್ರಾಮಸ್ಥರು ಆಕ್ರೋಶ । ಕ್ರಮವಹಿಸುವಂತೆ ಆಗ್ರಹ
ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ ಅಭಿವೃದ್ಧಿಗೊಳಿಸಿರುವ 1.20 ಕಿ.ಮೀ. ಡಾಂಬರು ರಸ್ತೆ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಳ್ಳೇಗಾಲ-ಮುಳ್ಳೂರು ಮುಖ್ಯ ರಸ್ತೆಯಿಂದ ಹಳೇ ಹಂಪಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಮೈಸೂರು ವಿಭಾಗದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನ 66.67 ಲಕ್ಷ ವೆಚ್ಚದಲ್ಲಿ 2022 ಸೆ.4ರಂದು ಆರಂಭಿಸಲಾಗಿತ್ತು.
ಚಾಮರಾಜನಗರ ತಾಲೂಕಿನ ಚಿಕ್ಕಬೇಗೂರು ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಎನ್.ಮಂಜುನಾಥ್ ಅವರು ಈ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದು, ಬುಧವಾರ ತರಾತುರಿಯಲ್ಲಿ ರಸ್ತೆಗೆ ಡಾಂಬರು ಹಾಕಿದ್ದಾರೆ. ಆದರೆ, ಈ ಡಾಂಬರು ರಸ್ತೆ ಅಲ್ಲಲ್ಲಿ ಕೇವಲ 24 ಗಂಟೆ ಕಳೆಯುವಷ್ಟರಲ್ಲಿ ಕಿತ್ತು ಬಂದಿರುವುದು ಹಾಗೂ ಡಾಂಬರು ಕಾಮಗಾರಿ ತೆಳ್ಳನೆಯ ಗಾತ್ರದಲ್ಲಿ ನಿರ್ಮಾಣಗೊಂಡಿರುವುದು ಹಳೇ ಹಂಪಾಪುರ ಗ್ರಾಮಸ್ಥರಲ್ಲಿ ಕಳಪೆ ಕಾಮಗಾರಿಯ ಅನುಮಾನ ಹುಟ್ಟಿಸಿದೆ.
ಈ ನಡುವೆ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಸ್ಥಳೀಯ ಯುವ ಮುಖಂಡರೊಬ್ಬರು ರಸ್ತೆ ಅಭಿವೃದ್ಧಿ ನಿರತ ಕಾರ್ಮಿಕರೊಂದಿಗೆ ಚರ್ಚಿಸಿದ್ದು, ಅವರು ಈ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತನಾಡಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
ಮಾತ್ರವಲ್ಲದೇ, ಕಾಮಗಾರಿ ನಡೆಯುವ ಸ್ಥಳದಲ್ಲಿ ಟೆಂಡರ್ ಪಡೆದ ಗುತ್ತಿಗೆದಾರರಾಗಲೀ ಅಥವಾ ಸಂಬಂಧಿಸಿದ ಇಲಾಖೆ ಇಂಜಿನಿಯರ್ ಗಳು ಇಲ್ಲದಿರುವುದು ಗ್ರಾಮಸ್ಥರ ಅಸಹನೆಗೆ ಕಾರಣವಾಗಿದೆ. ಹಾಗಾಗಿ, ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಯುವಕರು ಆಗ್ರಹಿಸಿದ್ದಾರೆ.


5ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದ ರಸ್ತೆಯನ್ನು ಅಭಿವೃದ್ಧಿಗೊಳಿಸಿರುವ ಹಿನ್ನೆಲೆ ಬುಧವಾರ ಕಾರ್ಮಿಕರು ಡಾಂಬರು ರಸ್ತೆ ನಿರ್ಮಿಸುತ್ತಿರುವುದು.
