ಮೈಸೂರು, ಜ 11: ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ವಾಪಸ್ ತಂದೆಗೆ ಬಿಟ್ಟುಕೊಟ್ಟಿರುವ ಯತೀಂದ್ರ ಸಿದ್ದರಾಮಯ್ಯನವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಬೈಯುತ್ತಿರುವ ಭರದಲ್ಲೇ ಯತೀಂದ್ರ ಸಿದ್ದರಾಮಯ್ಯನವರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಪ್ರದೀಶ್ ಈಶ್ವರ್, ಸಂಸದ ಪ್ರತಾಪ್ ಸಿಂಹನಂತಹ ಅಯೋಗ್ಯ, ಮುಠ್ಠಾಳ ಮತ್ತೊಬ್ಬನಿಲ್ಲ. ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ರೆ ಹುಷಾರ್, ಪರಿಣಾಮ ನೆಟ್ಟಗಿರಲ್ಲ. ನಿಮ್ಮ ಬಾಯಿ ತೆವಲನ್ನು ಕಡಿಮೆ ಮಾಡಿ ಸುಮ್ಮನೆ ಇರಬೇಕು. ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ಹಾಕಿದವನಿಗೆ ಪಾಸ್ ನೀಡಿದ್ದೀರಿ. ನೀವು ದೇಶ ದ್ರೋಹಿ ಅಲ್ಲವೇ? ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಈ ಬಾರಿ ಮೈಸೂರು ಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯನೇ ಗೆಲ್ಲೋದು ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಈ ಬಾರಿ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೈಸೂರು ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದಂತಾಗಿದೆ.
