ಮೈಸೂರು, ಫೆಬ್ರವರಿ 10, 2026 : ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು ಹಾಗೂ ಪ್ರಾಧಿಕಾರದ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರಗಳನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಇಂದು ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
ಪಾರಂಪರಿಕ ತಜ್ಞರು, ಪರಿಸರವಾದಿಗಳು ಹಾಗೂ ರಾಜಮನೆತನದವರ ವಿರೋಧದ ನಡುವೆಯೂ ಕಾಮಗಾರಿ ಮುಂದುವರಿಸುತ್ತಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಮುಖರು, “ಪಾರಂಪರಿಕತೆಯನ್ನು ಉಳಿಸಬೇಕಾದ ಸರ್ಕಾರವೇ ಇಂದು ಮೈಸೂರಿನ ಅಸ್ಮಿತೆಯನ್ನು ಹಾಳುಮಾಡುತ್ತಿದೆ. ಪ್ರಾಧಿಕಾರದ ಅಧ್ಯಕ್ಷರ ಕೈಗೊಂಬೆಯಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸಂಸದರು ವರ್ತಿಸುತ್ತಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರ ತೀರ್ಮಾನವೇ ಅಂತಿಮವಾಗುವುದಾದರೆ ಜನಪ್ರತಿನಿಧಿಗಳ ಕೆಲಸವಾದರೂ ಏನು? ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಾಧಿಕಾರದ ಅಧ್ಯಕ್ಷರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಿ” ಎಂದು ವ್ಯಂಗ್ಯವಾಡಿದರು.
ಮಡಿಕೇರಿಯಲ್ಲಿ ನಡೆದ ಭೂಕುಸಿತದ ಘಟನೆಗಳು ಕಣ್ಣಮುಂದಿದ್ದರೂ, ಬೆಟ್ಟದಲ್ಲಿ ದಾಸೋಹ ಭವನದ ಹೆಸರಿನಲ್ಲಿ ಪರಿಸರ ನಾಶ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಕಾಮಗಾರಿ ನಡೆಯುತ್ತಿರುವುದು ದುರಂತ. ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯಿತಿಯು ರಿಯಲ್ ಎಸ್ಟೇಟ್ ಕಚೇರಿಯಾಗಿ ಬದಲಾಗಿದ್ದು, ಬೆಟ್ಟದ ಸುತ್ತಮುತ್ತ ಅಕ್ರಮವಾಗಿ ಮನೆಗಳ ನಿರ್ಮಾಣವಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದರು.
ಕಾಡುಪ್ರಾಣಿಗಳು ನಗರಕ್ಕೆ ಬರುತ್ತಿದ್ದರೂ ಅಧಿಕಾರಿಗಳು ರೆಸಾರ್ಟ್‌ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಬೆಟ್ಟದ ಸಂಚಾರಿ ಮಾರ್ಗಗಳು ಕುಸಿಯುತ್ತಿದ್ದರೂ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಭಕ್ತಾದಿಗಳಿಗೆ ಕನಿಷ್ಠ ಮೂಲಸೌಕರ್ಯಗಳಾದ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯಿಲ್ಲ. ಆದರೆ, ಬ್ರೋಕರ್ ಸಹಾಯದಿಂದ ಹಣ ವಸೂಲಿ ಮಾಡಿ ದರ್ಶನಕ್ಕೆ ಬಿಡಲಾಗುತ್ತಿದೆ ಎಂದು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ರೈತ ಪರ್ವ ಅಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಉಮಾಪತಿ, ಸಾಯಿ ಚಾಮರಾಜು, ಪ್ಯಾಲೇಸ್ ಬಾಬು, ಹರೀಶ್ ಚಿನ್ನಪ್ಪ ಹಾಗೂ ಹಲವು ಮುಖಂಡರು ಭಾಗವಹಿಸಿದ್ದರು.
