ಮೈಸೂರು, ಫೆಬ್ರವರಿ 19, 2026: ಮೈಸೂರಿನ ಹಿನಕಲ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಅಕ್ಕಸಾಲಿಗ ಅಶ್ವಿನ್ ಕುಮಾರ್‌ನನ್ನು ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಸುಮಾರು 200 ಗ್ರಾಂ ಗೂ ಅಧಿಕ ಚಿನ್ನವನ್ನು ದೋಚಿದ್ದ ಆರೋಪ ಎದುರಿಸುತ್ತಿದ್ದ ಈತ, ಗ್ರಾಹಕರ ಒಡವೆಗಳಲ್ಲಿ ಕೈಚಳಕ ತೋರಿಸಿ ಅಕ್ರಮ ಎಸಗಿದ್ದ ಎನ್ನಲಾಗಿದೆ. ಈ ವಂಚನೆಯಿಂದ ಸಂಗ್ರಹಿಸಿದ ಹಣದಲ್ಲಿ ಕಳೆದ ಎರಡು ತಿಂಗಳಿನಿಂದ ಥೈಲ್ಯಾಂಡ್‌ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಆರೋಪಿ, ಅಲ್ಲಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬ್ಯಾಂಕ್‌ನಲ್ಲಿ ನಡೆದ ಈ ಗೋಲ್ಮಾಲ್‌ನಿಂದ ಆಕ್ರೋಶಗೊಂಡಿದ್ದ ನೂರಾರು ಗ್ರಾಹಕರು ಈ ಹಿಂದೆ ಬೀದಿಗೆ ಇಳಿದು ಬ್ಯಾಂಕ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಸಿಪಿ ರವಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಇನ್ಸ್‌ಪೆಕ್ಟರ್ ಸುರೇಶ್ ಅವರ ಸೂಚನೆಯಂತೆ ವಿಶೇಷ ತಂಡ ರಚಿಸಲಾಗಿತ್ತು.
ಸಬ್ ಇನ್ಸ್‌ಪೆಕ್ಟರ್ ಆನಂದ್, ಮುಖ್ಯಪೇದೆ ಪ್ರದೀಪ್ ಕುಮಾರ್ ಹಾಗೂ ಪೇದೆಗಳಾದ ಮಂಜುನಾಥ್ ಮತ್ತು ವೆಂಕಟೇಶ್ ಒಳಗೊಂಡ ತಂಡವು ನಿಖರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮೈಸೂರಿಗೆ ಕರೆತಂದಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ಮುಂದುವರಿದಿದ್ದು, ವಂಚನೆಯ ಪೂರ್ಣ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
