ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅಭಿಪ್ರಾಯ। ಚೊಕ್ಕಂಡಹಳ್ಳಿಯಲ್ಲಿ ಬೃಹತ್ ಸಮಾವೇಶ
ಕೋಲಾರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉದ್ಯಮಿಗಳ ಪರವಾಗಿದ್ದು, ಕಾಂಗ್ರೆಸ್ ಪಕ್ಷವು ದೇಶದ ಬಡವರ ಪರವಾಗಿದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ತಿಳಿಸಿದರು
ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗೇಟ್ ಬಳಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ-೨ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೋದಿ ಸರ್ಕಾರ ದೇಶದಲ್ಲಿನ ಉದ್ಯೋಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅದಾನಿಯ ಮಗನಿಗೆ ಎಲ್ಲಿ ಬೇಕಾದರೂ ಉದ್ಯೋಗ ದೊರೆಯುವಂತಹ ಪರಿಸ್ಥಿತಿಯಿದ್ದು ದೇಶದ ಬಡ ನಿರುದ್ಯೋಗಿಗಳಿಗೆ ಇಂತಹ ಅವಕಾಶವಿಲ್ಲ ಹೀಗಾಗಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ, ಯುವಕರಿಗೆ ಸರಕಾರಿ, ಖಾಸಗಿ ಹಾಗೂ ಅರೆ ಸರಕಾರಿ ಕ್ಷೇತ್ರಗಳಲ್ಲಿ ಉದ್ಯೋಗದ ಭರವಸೆಯನ್ನು ನೀಡುತ್ತೇವೆಂಬ ಆಶ್ವಾಸನೆ ನೀಡಿದರು.
ದೇಶದ ರೈತರು ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚದಂತಹ ಮೋದಿಯವರು, ೨೨ ಉದ್ಯಮಿಗಳ ೧೬ ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡಿದರೆ ರೈತರನ್ನು ಹಾಳು ಮಾಡುತ್ತಿದ್ದಾರೆಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ನಾವು ಉದ್ಯಮಿಗಳನ್ನು ಹಾಳು ಮಾಡುತ್ತಿದ್ದೀರಾ ಎಂದು ಹೇಳುವುದಿಲ್ಲ ಆದರೆ, ಉದ್ಯಮಿಗಳಂತೆ ರೈತರ ಸಮಸ್ಯೆಗಳಿಗೂ ಸ್ಪಂದಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಬಿಜೆಪಿಯ ಸರಕಾರವು ಗಲ್ಲಿಯಿಂದ ದೆಹಲಿಯವರೆಗೆ ತಾರತಮ್ಯ ಹರಡುತ್ತಿದ್ದು ದೇಶದ ಜನರಿಗೆ ಅನ್ಯಾಯ ಮಾಡುತ್ತಿದೆ. ದೇಶದ ಉದ್ಯಮಿಗಳ ಸಾಲ ಮನ್ನಾ ಮುಂದಿನ ೨೫ ವರ್ಷಗಳ ಕಾಲ ನರೇಗಾ ಯೋಜನೆಗೆ ಹಣ ಒದಗಿಸಬಹುದಾಗಿತ್ತು ಎಂದು ತಿಳಿಸಿದರು
ಕಾಂಗ್ರೆಸ್ ಪಕ್ಷವು ಪ್ರತಿಬಾರಿ ಜಾತಿಗಣತಿ ವಿಚಾರ ಪ್ರಸ್ತಾಪಿಸಿದಾಗಲೂ ಮೋದಿ ಮೌನಕ್ಕೆ ಶರಣಾಗುತ್ತಾರೆ ನೀವು ಜಾತಿಗಣತಿಯ ಪರವಾಗಿದ್ದೀರಾ ಅಥವಾ ವಿರುದ್ಧವಾಗಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮೂಲಕ ದೇಶದಲ್ಲಿ ದಲಿತರು, ಹಿಂದುಳಿದವರು, ಅಲ್ಪಾಸಂಖ್ಯಾತರು, ಬುಡಕಟ್ಟು ಜನರಿಗೆ ಸಂಖ್ಯೆಯನ್ನು ತಿಳಿಸುವ ಕೆಲಸ ಮಾಡುತ್ತೇವೆ ಕೇಂದ್ರ ಹಾಗೂ ರಾಜ್ಯದಲ್ಲಿ ಜಾತಿಗಣತಿ ನಡೆಸುವಂತಹ ಕ್ರಾಂತಿಕಾರಕ ತೀರ್ಮಾನವನ್ನು ಕಾಂಗ್ರೆಸ್ ತೆಗೆದುಕೊಳ್ಳಲಿದ್ದು ಭಾರತದ ಎಕ್ಸರೇ ತೆಗೆದು ನಿಜವಾದ ಭಾರತದ ಚಿತ್ರಣವನ್ನು ಜನರಿಗೆ ತಿಳಿಸುವಂತಹ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ದೇಶವನ್ನು ನಡೆಸುತ್ತಿರುವ ೯೦ ಅಧಿಕಾರಿಗಳ ಪಟ್ಟಿಯಲ್ಲಿ ಹಿಂದುಳಿದವರು, ದಲಿತರು ಹಾಗೂ ಆದಿವಾಸಿ ಅಧಿಕಾರಿಗಳು ಕೇವಲ ೭ ಮಂದಿ ಮಾತ್ರವಿದ್ದು, ಉಳಿದವರೆಲ್ಲರೂ ಮೇಲ್ವರ್ಗದವರಿದ್ದಾರೆ. ಇರುವ ಅಧಿಕಾರಿಗಳಿಗೂ ಯಾವುದೇ ಜವಾಬ್ದಾರಿಗಳಿಲ್ಲ ಬಜೆಟ್ ಶೇ.೬.೫೦ರಷ್ಟು ಮೊತ್ತಕ್ಕೆ ಮಾತ್ರವೇ ಈ ಅಧಿಕಾರಿಗಳು ಜವಾಬ್ದಾರರಾಗಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಮಾಧ್ಯಮಗಳು ಮೇಲ್ವರ್ಗದವರ ಹಿಡಿತದಲ್ಲಿವೆ: ದೇಶದಲ್ಲಿ ಶೇ.೧೫ರಷ್ಟು ದಲಿತರು, ಶೇ.೮ರಷ್ಟು ಬುಡಕಟ್ಟು, ಶೇ.೫೦ರಷ್ಟು ಹಿಂದುಳಿದ ವರ್ಗದವರು ಹಾಗೂ ಶೇ.೧೫ರಷ್ದಟು ಅಲ್ಪಸಂಖ್ಯಾತರಿದ್ದು ಶೇ.೫ರಷ್ಟು ಜನರು ಬಡತನ ರೇಖೆಗಿಂತ ಕೆಳಗಿನವರಿದಾರೆ. ಆದರೆ, ದೇಶದ ಮಾಧ್ಯಮ ಸಂಸ್ಥೆಗಳನ್ನು ಗಮನಿಸಿದಾಗ ಶೇ.೯೦ರಷ್ಟು ಭಾಗವಿರುವ ಈ ಜನರು ಸಿಗುವುದೇ ಅಪರೂಪವಾಗಿದೆ ಸಾವಿರಾರು ನಿರೂಪಕರು ಜನಾಭಿಪ್ರಾಯ ರೂಪಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದರೂ, ಇವರು ಯಾರು ಜನರ ಸಮಸ್ಯೆಗಳು, ನಿರುದ್ಯೋಗ, ಬೆಲೆ ಏರಿಕೆ, ತಾರತಮ್ಯದಂತಹ ವಿಷಯಗಳನ್ನು ಕೈಗೆತ್ತಿಕೊಳ್ಳುವುದೇ ಇಲ್ಲ ದಿನದ ೨೪ ಗಂಟೆಗಳ ಮಾಧ್ಯಮಗಳಲ್ಲಿ ಮೋದಿ ಮುಖವನ್ನೇ ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಏನು ಸಾಧನೆ ಮಾಡದಂತಹ ಮೋದಿಯವರು ಇದೀಗ ಕಾಂಗ್ರೆಸ್‌ನ ಗ್ಯಾರೆಂಟಿಗಳ ಕಳ್ಳತನ ಮಾಡಿದ್ದು ಮೋದಿ ಗ್ಯಾರೆಂಟಿ ಎಂದು ಜನರನ್ನು ಯಾಮಾರಿಸಲು ಹೊರಟಿದ್ದಾರೆ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಗ್ಯಾರೆಂಟಿಗಳು ಯಶಸ್ವಿಯಾಗಿದ್ದು ಇದೀಗ ಗ್ಯಾರೆಂಟಿಗಳ ಹಿಂದೆ ಬಿದ್ದಿರುವ ಬಿಜೆಪಿಯು ಗ್ಯಾರೆಂಟಿಗಳನ್ನು ಘೋಷಿಸುತ್ತಿದ್ದಾರೆ. ಆದರೆ, ಗ್ಯಾರೆಂಟಿಗಳನ್ನು ಜಾರಿಗೊಳಿಸುವುದು ಕಾಂಗ್ರೆಸ್ ಮಾತ್ರವೇ ಆಗಿದ್ದು ಜನರು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿಯನ್ನು ಮಾಡಿಕೊಂಡಿದ್ದು ಕೋಮುವಾದಿಯನ್ನು ವಿರೋಸುತ್ತಿದ್ದ ಜೆಡಿಎಸ್ ಬಿಜೆಪಿಯನ್ನು ಹೊಗಳುತ್ತಿದೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಪಕ್ಷ ಈ ಬಾರಿ ೨೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲಿಸಲಿದ್ದಾರೆ ಎಂದರು
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ ಟಿಕೆಟ್ ವಿಚಾರದಲ್ಲಿ ಪಕ್ಷದಲ್ಲಿ ಆಗಿರುವ ವ್ಯತ್ಯಾಸಗಳನ್ನು ಮರೆತು ಕಾಂಗ್ರೆಸ್ ಭದ್ರಕೋಟೆಯಾದ ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮುಂದಾಗಬೇಕು. ಮುಂದಿನ ಹತ್ತು ವರ್ಷ ಗ್ಯಾರೆಂಟಿಗಳು ನಿಲ್ಲುವುದಿಲ್ಲ, ಮಹಿಳೆಯರಿಗೆ ಅಪಮಾನ ಮಾಡಿದ ಜೆಡಿಎಸ್‌ಗೆ ಜನರು ಪಾಠ ಕಲಿಸಬೇಕು.
ಸಚಿವರಾದ ಬೈರತಿ ಸುರೇಶ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಶರತ್ ಬಚ್ಚೇಗೌಡ, ಎಂಎಲ್ಸಿಗಳಾದ ಎಂ.ಎಲ್ ಅನಿಲ್ ಕುಮಾರ್, ಮಾಜಿ ಸಚಿವರಾದ ಕೆ.ಆರ್.ರಮೇಶ್‌ಕುಮಾರ್, ವಿ ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನಂದಿನಿ ಪ್ರವಿಣ್, ಸೇರಿದಂತೆ ಪ್ರಮುಖರಿದ್ದರು.

